15 ದಿನದೊಳಗೆ ಅಂಬೇಡ್ಕರ್ ಭವನ ಪೂರ್ಣಗೊಳಿಸದಿದ್ದರೆ ತಮಟೆ ಚಳವಳಿ

mysore
Published on

ಮೈಸೂರು: ನಗರದಲ್ಲಿ ಅಪೂರ್ಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಇನ್ನೂ 15 ದಿನದೊಳಗೆ ಪುನರಾರಂಭಿಸಬೇಕು. ಇಲ್ಲದಿದ್ದರೆ ಅಪೂರ್ಣ ಭವನದ ಎದುರು ತಮಟೆ ಬಾರಿಸುವ ಚಳವಳಿ ನಡೆಸಲಾಗುವುದು ಎಂದು ಪ್ರಬುದ್ಧ ಭಾರತ ಭೀಮ್ ಸೇನೆ ಎಚ್ಚರಿಕೆ ನೀಡಿದೆ.

ಭವನ ನಿರ್ಮಾಣ ಆರಂಭವಾಗಿ ಅಂದಾಜು 14 ವರ್ಷಗಳೇ ಕಳೆದಿವೆ. ಆದರೂ ಕೆಲಸ ಮುಗಿಸಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನೀಡಿದ್ದ ಭರವಸೆ ಈಡೇರಿಲ್ಲ.

ಹೀಗಾಗಿ ತಮಟೆ ಚಳವಳಿ ಮೂಲಕ ಸರ್ಕಾರ, ಜಿಲ್ಲಾಡಳಿತ, ಎಂಡಿಎಯನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ. ಒಂದು ವೇಳೆ ಆ ಬಳಿಕವೂ ನಿರ್ಲಕ್ಷಿಸಿದರೆ ಸ್ಥಳದಲ್ಲಿ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಸಿದ್ದರಾಜು ತಿಳಿಸಿದರು.

ಈ ಹಿಂದೆ ಹಲವಾರು ಬಾರಿ ಹೋರಾಟ ಮಾಡಿದಾಗ ಉಸ್ತುವಾರಿ ಸಚಿವರು, ‘ಭವನ ನಿರ್ಮಾಣಕ್ಕೆ ಸಿಎಂ ಸುಮಾರು 23 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ ಎಂದಿದ್ದರು. ಎಂಡಿಎ ಆಯುಕ್ತರು ಸಹ ಆ ರೀತಿ ಹೇಳಿದ್ದರು.

ಹೀಗಿರುವಾಗ ಕಾಮಗಾರಿ ಪುನರಾರಂಭಕ್ಕೆ ಇರುವ ಅಡ್ಡಿಯೇನು ತಿಳಿಯುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಕಾರಣ ತಿಳಿಸಬೇಕು ಎಂದು ಹೇಳಿದರು. ಮುಖಂಡರಾದ ರವಿಕುಮಾರ್, ನಿಂಗರಾಜು, ಸಿ. ಶಿವರಾಮು ಹಾಗೂ ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net