

ಹೊಳೆನರಸೀಪುರ : ಮನೆಗೆ ಬೀಗ ಹಾಕದೆ ಬಸ್ ನಿಲ್ದಾಣಕ್ಕೆ ಮಾಲೀಕರು ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಬೀರುವಿನಲ್ಲಿಟ್ಟಿದ್ದ 15 ಗ್ರಾಂ ಚಿನ್ನಾಭರಣ ಹಾಗು ಬೆಳ್ಳಿ ಸಾಮಾಗ್ರಿ ಕಳವು ಮಾಡಿರುವ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಪಟ್ಟಣದ ಸಿಂಗಮ್ಮ ದೇವಸ್ಥಾನ ಹತ್ತಿರದ ಗಣೇಶ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಗೆ ಬಂದಿದ್ದ ಸಂಬಂಧಿಕರನ್ನು ಬಿಟ್ಟುಬರಲು ಗಣೇಶ ಹಾಗು ಪತ್ನಿ ಗಾನವಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು 60 ಸಾವಿರ ರೂ. ಬೆಲೆಯ 12 ಗ್ರಾಂ ತೂಕದ 3 ಜೊತೆ ಚಿನ್ನದ ಓಲೆ, 10 ಸಾವಿರ ರೂ. ಬೆಲೆಯ 2 ಗ್ರಾಂ ತೂಕದ ಚಿನ್ನದ ನಾಣ್ಯ, 5 ಸಾವಿರ ರೂ. ಮೊತ್ತದ 1 ಗ್ರಾಂ ತೂಕದ ಚಿನ್ನದ ಮೂಗು ಬೊಟ್ಟು, 5 ಸಾವಿರ ರೂ. ಬೆಲೆಯ ಒಂದು ಜೊತೆ ಬೆಳ್ಳಿಯ ಬಟ್ಟಲು, 10 ಸಾವಿರ ರೂ. ನಗದು ಅಪಹರಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ