15 ಕೆಜಿ ಬದಲು 10 ಕೆಜಿ ಅಕ್ಕಿ ವಿತರಣೆ

22
Published on

ಸ್ವತ ಸ್ಕೇಲ್​ ತಂದು ಅಧಿಕಾರಿಗೆ ತೂಕದ ವ್ಯತ್ಯಾಸ ತೋರಿಸಿದ ಕಾರ್ಡ್​ದಾರರು

ಹುಳಿಯಾರು: ಹೋಬಳಿಯ ಗೌಡಗೆರೆಯಲ್ಲಿ ಶುಕ್ರವಾರ ಒಬ್ಬರಿಗೆ ತಲಾ 15 ಕೆಜಿ ಅಕ್ಕಿ ಬದಲು 10 ಕೆಜಿ ಕೊಡುತಿದ್ದುದನ್ನು ಖಂಡಿಸಿ ಕಾರ್ಡ್​ದಾರರು ಸೊಸೈಟಿಗೆ ಮುತ್ತಿಗೆ ಹಾಕಿ ವಂಚನೆಯ ವಿರುದ್ಧ ಪ್ರತಿಭಟಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊರತೆಯಿಂದಾಗಿ ಇಲ್ಲಿಯವರೆಗೂ ತಲಾ 5 ಕೆಜಿ ಅಕ್ಕಿ ಉಳಿದ 5 ಕೆಜಿಗೆ ಕಾರ್ಡ್​ದಾರರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿತ್ತು. ಫೆಬ್ರವರಿ ತಿಂಗಳಿಂದಲೇ ಹಣದ ಬದಲು ಅಕ್ಕಿ ಕೊಡುವುದಾಗಿ ಸರ್ಕಾರ ಘೋಷಿಸಿ ಮಾರ್ಚ್​ನಿಂದ 10 ಕೆಜಿ ಅಕ್ಕಿಯ ಜತೆಗೆ ಫೆಬ್ರವರಿಯ 5 ಕೆಜಿ ಅಕ್ಕಿಯನ್ನೂ ಸೇರಿಸಿ ತಲಾ 15 ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಆದರೆ ಗೌಡಗೆರೆಯ ನ್ಯಾಯಬೆಲೆ ಅಂಗಡಿಯಲ್ಲಿ ಯಾರೊಬ್ಬರಿಗೂ 15 ಕೆಜಿ ವಿತರಿಸದೆ 10, 12, 14 ಹೀಗೆ ವ್ಯಕ್ತಿಯನ್ನು ನೋಡಿ ಅಕ್ಕಿ ವಿತರಿಸಲಾಗುತ್ತಿತ್ತು. ವೃದ್ಧರು, ವಿದ್ಯಾರ್ಥಿಗಳು, ಅನಕ್ಷರಸ್ಥರು ಬಂದರೆ ತಲಾ 10 ಕೆಜಿ ಅಕ್ಕಿ, ಪುರುಷರು ಬಂದರೆ 13 ಅಥವಾ 14 ಕೆಜಿ ಅಕ್ಕಿ ಕೊಟ್ಟು ತೂಕದಲ್ಲಿ ವಂಚಿಸಲಾಗುತ್ತಿತ್ತು. ಅಂತ್ಯೋದಯ ಕಾರ್ಡ್​ದಾರರಿಗೆ 3 ಮಂದಿವರೆಗೆ 35 ಕೆಜಿ ನಂತರ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಹೆಚ್ಚುವರಿಯಾಗಿ ವಿತರಿಸುವ ಬದಲು ನಾಲ್ಕು, ಐದು, ಆರು ಹೀಗೆ ಕುಟುಂಬದ ಸದಸ್ಯರು 3 ಕ್ಕಿಂತ ಹೆಚ್ಚಿದ್ದರೂ 35 ಕೆಜಿ ಮಾತ್ರ ವಿತರಿಸಲಾಗುತ್ತಿತ್ತು.

ಸಹಜವಾಗಿ ಇದರಿಂದ ಆಕ್ರೋಶಗೊಂಡ ಪಡಿತರದಾರರು ಸೊಸೈಟಿಗೆ ಮುತ್ತಿಗೆ ಹಾಕಿ ತೂಕದಲ್ಲಿ ವಂಚಿಸುತಿದ್ದುದನ್ನು ಪ್ರಶ್ನಿಸಿದರು. ಅಕ್ಕಿ ಕಡಿಮೆ ಬಂದಿದೆ ಹೊಂದಾಣಿಕೆ ಮಾಡಿ ಕೊಡಿ ಎಂದು ಮೇಲಧಿಕಾರಿಗಳು ಹೇಳಿರುವುದರಿಂದ ಕಡಿಮೆ ಕೊಡಲಾಗುತ್ತಿದೆ ಎಂದು ಸೊಸೈಟಿಯ ರಾಜು ಸಬೂಬು ಹೇಳಿದರು. ತಕ್ಷಣ ಆಹಾರ ನಿರೀಕ್ಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅನ್ಯಾಯದ ಬಗ್ಗೆ ಗಮನಕ್ಕೆ ತಂದರಲ್ಲದೆ ನ್ಯಾಯ ಕೊಡಿಸಬೇಕು ಎಂದು ಪಟ್ಟು ಹಿಡಿದರು. ಆಹಾರ ನಿರೀಕ್ಷಕ ಪ್ರಜ್ವಲ್​ ಗೌಡಗೆರೆಗೆ ದೌಡಾಯಿಸಿ ಪಡಿತರದಾರರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಕಾರ್ಡ್​ದಾರರೇ ಸ್ಕೇಲ್​ ತಂದು ಸೊಸೈಟಿಯವರು ತೂಗಿ ಕೊಟ್ಟಿರುವ ಅಕ್ಕಿ ಚೀಲವನ್ನು ಮತ್ತೆ ತೂಗಿ ವಂಚಿಸಿರುವುದನ್ನು ತೋರಿಸಿದರು. ಅಲ್ಲದೆ ತಿಂಗಳಿಗೆ ಮೂರ್ನಾಲ್ಕು ದಿನ ಮಾತ್ರ ರೇಷನ್​ ಕೊಡುತ್ತಾರೆ. ಅವರು ಕರೆದಾಗ ಹೋಗದಿದ್ದರೆ ಆ ತಿಂಗಳ ರೇಷನ್​ ಕೊಡುವುದಿಲ್ಲ. ಹಾಗಾಗಿ ಕೆಲಸ ಕಾರ್ಯ ಬಿಟ್ಟು ಮೂರ್ನಾಲ್ಕು ಕಿಮೀ ಬಿಸಿಲಿನಲ್ಲಿ ನಡೆದು ಬಂದು ರೇಷನ್​ ತೆಗೆದುಕೊಂಡು ಹೋಗುತ್ತೇವೆ. ಆದರೆ ಹೀಗೆ ತೂಕದಲ್ಲಿ ಮೋಸ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರಲ್ಲದೆ ನಮ್ಮೂರಿಗೆ ಪ್ರತ್ಯೇಕ ಸೊಸೈಟಿ ಮಾಡಿಕೊಡಿ ಎಂದು ಒತ್ತಾಯಿಸಿದರು.

ಕರೆಂಟ್​ ಹೋದರೆ ಸ್ಕೇಲ್​ ಆಫ್​: ಗೌಡಗೆರೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ತೂಗಿ ಕೊಡಲು ಸ್ಕೇಲ್​ ಇದೆ. ಈ ಸ್ಕೇಲ್​ 30 ಕೆಜಿ ಮಾತ್ರ ತೂಗುವಂತೆ ಲಾಕ್​ ಮಾಡಲಾಗಿದೆ. ಅಲ್ಲದೆ ಕರೆಂಟ್​ ಹೋದಾಗ ಸ್ಕೇಲ್​ ಆಫ್​ ಆಗುತ್ತದೆ. ಆಗ ಕರೆಂಟ್​ ಹೋಗಿದೆ ಎಂದು ಹೇಳಿ ಕಣ್ಣಳತೆಯಲ್ಲೇ ತೂಗಿ ಕೊಡುತ್ತಿದ್ದಾರೆ. ಇದು ತೂಕದಲ್ಲಿ ವಂಚಿಸಲು ಸಹಕಾರಿಯಾಗಿದೆ. ಶುಕ್ರವಾರ ಆಹಾರ ನೀರೀಕ್ಷಕರು ಬಂದಾಗಲೂ ಕರೆಂಟ್​ ಇಲ್ಲದ ಕಾರಣದಿಂದ ಸ್ಕೇಲ್​ ಆಫ್​ ಆಗಿ ಅಂದಾಜಿನ ಪ್ರಕಾರ ಅಕ್ಕಿ ಕೊಡುತ್ತಿದ್ದರು. ಕೊನೆಗೆ ಕಾರ್ಡ್​ದಾರರೇ ತಂದಿದ್ದ ಸ್ಕೇಲ್​ನಲ್ಲಿ ಉಳಿದ ಜನರಿಗೆ ಅಕ್ಕಿ ತೂಗಿ ಕೊಡುವ ವ್ಯವಸ್ಥೆ ಮಾಡಲಾಯಿತು.

ಗೌಡಗೆರೆ ಸೂಸೈಟಿ ಬಗ್ಗೆ ಈ ಹಿಂದೆಯೂ ಅನೇಕ ದೂರುಗಳು ಬಂದಿದ್ದವು. ತಿದ್ದಿಕೊಳ್ಳಿ ಎಂದು ನೋಟಿಸ್​ ಕೊಟ್ಟು ಎಚ್ಚರಿಸಲಾಗಿತ್ತು. ಆದರೂ ಇಂದು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಕಾರ್ಡ್​ದಾರರ ಸಮಕ್ಷಮದಲ್ಲೇ ಮಹಜರ್​ ಸಹ ಮಾಡಲಾಗಿದ್ದು, ತೂಕದಲ್ಲಿ ವಂಚಿಸಿರುವುದು ಕಂಡು ಬಂದಿದೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು.

| ಪ್ರಜ್ವಲ್​ ಆಹಾರ ನಿರೀಕ್ಷಕ, ಚಿಕ್ಕನಾಯಕನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net