

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆ ಸ್ವಾಗತಕ್ಕಾಗಿ ಎಂ.ಜಿ ರಸ್ತೆ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಮೋಜು-ಮಸ್ತಿ ಮಾಡಿ ಹೋದ ಬಳಿಕ ಅಳಿದುಳಿದ 15 ಮೆಟ್ರಿಕ್ ಟನ್ ಕಸವನ್ನು ಪಾಲಿಕೆಯ ಪೌರಕಾರ್ಮಿಕರು ಬುಧವಾರ ಶ್ರಮವಹಿಸಿ ಸಂಗ್ರಹಿಸಿ ಮೊದಲಿನಂತೆ ಸ್ವಚ್ಛ ಸ್ಥಳಗಳಾಗಿ ಮಾರ್ಪಡಿಸಿದರು.
ಮಂಗಳವಾರ ರಾತ್ರಿ ಸಿಟಿ ಬಿಜಿನೆಸ್ ಡಿಸ್ಟ್ರಿಕ್ (ಸಿಬಿಡಿ) ವ್ಯಾಪ್ತಿಗೆ ಬರುವ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್‌ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾಕ್ಸ್ ರಸ್ತೆ, ಕಸ್ತೂರ್ ಬಾ ರಸ್ತೆ ಸೇರಿ ವಿವಿಧೆಡೆಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ವೇಳೆ ಕೇಕ್, ಚಾಕೊಲೇಟ್ ಇತ್ಯಾದಿ ತಿನಿಸುಗಳನ್ನು ರಸ್ತೆ ಬದಿಯೇ ಬಿಸಾಡಲಾಗಿತ್ತು. ಜತೆಗೆ ಪಾದಚಾರಿ ಮಾರ್ಗಗಳಲ್ಲಿ ಪ್ಲಾಸ್ಟಿಕ್ ಕವರ್, ಚಪ್ಪಲಿಗಳು, ಮದ್ಯದ ಬಾಟಲಿ ಸೇರಿ ಇನ್ನಿತರ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ತೂರಿ ಹೋಗಿದ್ದರು.
ವರ್ಷಾಚರಣೆ ಮುಗಿಯುತ್ತಿದ್ದಂತೆ ಬುಧವಾರ ಮುಂಜಾನೆ 4ರಿಂದ ಪಾಲಿಕೆಯ ನೂರಾರು ಪೌರಕಾರ್ಮಿಕರು ವಿವಿಧ ರಸ್ತೆ, ಫುಟ್‌ಪಾಟ್‌ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಕೆಲಸ ಮಧ್ಯಾಹ್ನದವರೆಗೂ ಮುಂದುವರಿಸಿ ಅಂದಾಜು 15 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸಿ ಆ ಭಾಗದ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಸಂಗ್ರಹಿಸದ ಕಸದಲ್ಲಿ ಪುನರ್ ಬಳಕೆಯ 3 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಿಕೊಡಲಾಯಿತು ಎಂದು ಪಾಲಿಕೆಯ ಪೂರ್ವ ವಲಯ ಆಯುಕ್ತೆ ಸ್ನೇಹಲ್ ತಿಳಿಸಿದ್ದಾರೆ.
100ಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗಿ:
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮ (ಬಿಎಸ್‌ಡಬ್ಯುಎಂಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ನೇತೃತ್ವದಲ್ಲಿ ಹೊಸ ವರ್ಷಾಚರಣೆಯ ವೇಲೆ ಸೃಸ್ಟಿಯಾಗಿದ್ದ ಕಸವನ್ನು ಸ್ವಚ್ಛಗೊಳಿಸಿ ವಿಲೇವಾರಿ ಮಾಡುವ ಹೊಣೆ ಹೊತ್ತಿದ್ದರು. ಶಾಂತಿನಗರದ ಘನತ್ಯಾಜ್ಯ ವಿಭಾಗದಿಂದ 100ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತೆ ಕೈಗೊಂಡರು. ಇವರಲ್ಲದೆ ಕಿರಿಯ ಆರೋಗ್ಯ ಅಧಿಕಾರಿಗಳು, ಮಾರ್ಷಲ್‌ಗಳು ಮೇಲ್ವಿಚಾರಣೆಯಲ್ಲಿದ್ದು, 25 ಆಟೋ ಟಿಪ್ಪರ್‌ಗಳು, ಮೂರು ಕಾಂಪ್ಯಾಕ್ಟರ್‌ಗಳನ್ನು ಬಳಸಿ ತ್ಯಾಜ್ಯವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಮಧ್ಯಾಹ್ನದ ವೇಳೆ ಎಲ್ಲ ರಸ್ತೆಗಳು ಸ್ವಚ್ಛಗೊಳಿಸಿದ್ದಕ್ಕೆ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರನ್ನು ಅಭಿನಂದಿಸಿದರು.
ಈ ವೇಳೆ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಕುಮಾರ್, ಚೀಫ್ ಮಾರ್ಷಲ್ ರಾಜ್‌ಬಿರ್ ಸಿಂಗ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅಪ್ಪುರಾಜ್ ಇದ್ದರು.
ವಾಯುವಿಹಾರಿಗಳಿಂದ ಸ್ವಚ್ಛತೆ ಪರಿಶೀಲನೆ:
ಎಂ.ಜಿ.ರಸ್ತೆಯ ಸುತ್ತಮುತ್ತ ಸ್ವಚ್ಛತೆ ಕುರಿತು 25 ಸ್ಥಳೀಯ ವಾಯುವಿಹಾರಿಗಳು ಬೆಳಗ್ಗೆ 7 ಗಂಟೆಯಿಂದ ಏಳು ಕಿ.ಮೀ. ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ಸುತ್ತಾಡಿ ಸ್ವಚ್ಛತಾ ಕಾರ್ಯವನ್ನು ಖಾತ್ರಿಪಡಿಸಿದರು. ಹೊಸ ವರ್ಷಾಚರಣೆ ಹುಚ್ಚಾಟಕ್ಕೆ ಇಷ್ಟೊಂದು ಕಸ ಉತ್ಪತ್ತಿಯಾಗಿರುವುದಕ್ಕೆ ಬೇಸರ ಹೊರಹಾಕಿದರೂ, ಪೌರಕಾರ್ಮಿಕರ ಶ್ರಮವನ್ನು ಶ್ಲಾಸಿದರು.