ಕಂಟ್ರೋಲ್ ಸೆಂಟರ್‌ಗೆ 15 ಸಾವಿರ ಕರೆ, ಕರೊನಾ ಮೇಲ್ವಿಚಾರಣಾ ಕೇಂದ್ರದಲ್ಲಿ ಸೇವೆ

corona cntr
Published on

ಮಂಗಳೂರು: ದ.ಕ ಜಿಲ್ಲೆಯ ಕರೊನಾ ಮೇಲ್ವಿಚಾರಣಾ ಕೇಂದ್ರವಾಗಿ ಬಳಕೆಯಾಗುತ್ತಿರುವ ಮಂಗಳೂರು ಸ್ಮಾರ್ಟ್‌ಸಿಟಿ ಕಂಟ್ರೋಲ್ ಸೆಂಟರ್ ಲಾಕ್‌ಡೌನ್ ಅವಧಿಯಲ್ಲಿ ನಾಗರಿಕರಿಗೆ ತುರ್ತು ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ.

13 ದಿವಸದಲ್ಲಿ ಕಂಟ್ರೋಲ್ ಸೆಂಟರ್ 15,600 ಕರೆಗಳನ್ನು ಸ್ವೀಕರಿಸಿದೆ. ತುರ್ತು ವೈದ್ಯಕೀಯ ಸೇವೆ ಬಯಸಿದ 1,896 ಮಂದಿಗೆ ಈ ಕೇಂದ್ರದ ಮೂಲಕ ಮೆಡಿಕಲ್ ಪಾಸ್ ಒದಗಿಸಲಾಗಿದೆ. ಕೇಂದ್ರದಲ್ಲಿ ತಲಾ 15 ಸಿಬ್ಬಂದಿ ಮೂರು ಪಾಳಿ 24*7 ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾಹಿತಿ ಸಂಗ್ರಹ ಹಾಗೂ ರವಾನೆಗೆ ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಹಿತ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಪುತ್ತೂರು ಸಹಾಯಕ ಆಯುಕ್ತರ ಕಚೇರಿ, ಸಾರಿಗೆ ಇಲಾಖೆ ಅಧಿಕಾರಿಗಳು ಇಲ್ಲಿ ಕರೆಗಳನ್ನು ಸ್ವೀಕರಿಸಿ ಜನತೆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಾಗರಿಕರು ಮನೆಯಲ್ಲೇ ಕುಳಿತು ಟಿಲಿಮೆಡಿಸಿನ್ ಸೌಲಭ್ಯ ಪಡೆಯುತ್ತಿದ್ದಾರೆ. ಡಿಸಿ ಕೊವಿಡ್ ಕಂಟ್ರೋಲ್ ರೂಂ.ವಾಟ್ಸಾಪ್ ನಂ: 94839 08000, ಡಿಸಿ ಕಂಟ್ರೋಲ್ ರೂಂ. ನಂ. : 1077

ಸಂಪೂರ್ಣ ಲಾಕ್‌ಡೌನ್ ಸಂದರ್ಭ ಪ್ರತೀದಿನ ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಲಾಗಿತ್ತು. ನಗರ ಪ್ರದೇಶದಿಂದಲೇ ಶೇ.80 ಕರೆಗಳು ಬಂದಿದ್ದವು. ವೈದ್ಯರು ನೀಡಿದ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಇದ್ದವರಿಗೆ ಮೆಡಿಕಲ್ ಪಾಸ್ ಹಾಗೂ ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಸುರತ್ಕಲ್, ಬೈಕಂಪಾಡಿ ಪ್ರದೇಶದ ವಲಸೆ ಕಾರ್ಮಿಕರು ಆಹಾರ ಸಾಮಗ್ರಿಗೆ ಕರೆ ಮಾಡಿದ್ದು, ತಕ್ಷಣ ಪೂರೈಸಲಾಗಿದೆ. ಕಾನೂನು, ಸುವ್ಯವಸ್ಥೆ ಸಂಬಂಧಿಸಿದ ಕರೆಗಳನ್ನು ಪೊಲೀಸ್ ಅಧಿಕಾರಿಗಳು ಸ್ವೀಕರಿಸಿ ಆಯಾ ಠಾಣೆಗೆ ಮಾಹಿತಿ ಒದಗಿಸುತ್ತಿದ್ದಾರೆ.

ದಿನೇಶ್‌ಕುಮಾರ್, ಮುಡಾ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net