ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

15-point program progress review meeting Mandya
Published on

ಮಂಡ್ಯ: ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆ ರೂಪಿಸುತ್ತದೆ. ಅವುಗಳನ್ನು ಅರ್ಹರಿಗೆ ತಲುಪಿಸಿ ಅವರ ಜೀವನಮಟ್ಟ ಸುಧಾರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 5 ವರ್ಷದಿಂದ ಅಲ್ಪಸಂಖ್ಯಾತರಿಗಾಗಿ ನೀಡಿರುವ ಯೋಜನೆಗಳನ್ನು ಪಡೆದ ನಂತರ ಅವರ ಜೀವನಮಟ್ಟ ಸುಧಾರಣೆಯಾಗಿರುವ ಬಗ್ಗೆ ಸಮೀಕ್ಷೆ ನಡೆಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿರುವ ವಸತಿ ಹಾಗೂ ನಿವೇಶನ ರಹಿತ, ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡವರು, ತೋಟಗಾರಿಕೆ ಅಲ್ಪಸಂಖ್ಯಾತರ ಪಟ್ಟಿಯನ್ನು ಇಟ್ಟುಕೊಂಡರೆ ಅವರಿಗೆ ಯೋಜನೆ ತಲುಪಿಸುವುದು ಸುಲಭ. ಮುಂದಿನ ಸಭೆಯಲ್ಲಿ ಮಾಹಿತಿ ಸಲ್ಲಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಸೂಚಿಸಿದ ಡಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವಾಗಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸ್ಥಳಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ ಆಯೋಜಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಧನುಷ್, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಸಮುದಾಯದ ಮುಖಂಡರಾದ ಶೇಖ್ ಉಬೇದುಲ್ಲಾ, ಲೂರ್ದ ಪ್ರಸಾದ್, ಎಂ.ಜೆ.ವಿನಯ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net