ಪಿ.ಸಿ. ಜಾಬಿನ ಕಾಲೇಜ್​ಗೆ 15 ಪೇಟೆಂಟ್

New Munavalli Pm New
Published on

ಹುಬ್ಬಳ್ಳಿ : ಇಲ್ಲಿನ ಕೆಎಲ್​ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡಾ. ಜಗದೀಶ ಅಂಗಡಿ ಅವರು 10 ಹಾಗೂ ರಸಾಯನಶಾಸ್ತ್ರ ವಿಭಾಗದ ಡಾ. ಎನ್. ರಾಘವೇಂದ್ರ ಅವರು 5 ಪೇಟೆಂಟ್​ಗಳನ್ನು ಪಡೆದುಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಡಾ. ಜಗದೀಶ ಅಂಗಡಿ ಅವರು ಅಮೆರಿಕದಿಂದ 4, ಜರ್ಮನಿಯಿಂದ 5 ಹಾಗೂ ಭಾರತದಿಂದ 1 ಪೇಟೆಂಟ್​ಗಳನ್ನು ಪಡೆದಿದ್ದಾರೆ. ಡಾ. ಎನ್. ರಾಘವೇಂದ್ರ ಅವರು ಐದೂ ಪೇಟೆಂಟ್​ಗಳನ್ನು ಭಾರತದಿಂದ ಪಡೆದಿದ್ದಾರೆ ಎಂದು ತಿಳಿಸಿದರು.

ಹ್ಯೂಮಿಡಿಟಿ ಸೆನ್ಸರ್, ದುರ್ಲಭ ಭೂತತ್ವ ಪದಾರ್ಥಗಳಿಂದ ಡೋಪ್ ಮಾಡಿದ ಪಿಗ್ಮಂಟ್​ಗಳು, ಸೂಪರ್ ಕ್ಯಾಪಾಸಿಟರ್ ಪರೀಕ್ಷಾ ಸಾಧನ, ಹೆಟರೋಜಂಕ್ಷನ್ ಪೋಟೋಕ್ಯಾಟಲಿಸ್ಟ್ ಸೇರಿದಂತೆ ವಿವಿಧ ವಿಷಯಗಳ ಮೇಲೆ 15 ಪೇಟೆಂಟ್​ಗಳನ್ನು ಇಬ್ಬರೂ ಸಂಶೋಧಕರು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಡಾ. ಜಗದೀಶ ಅಂಗಡಿ ಅವರು 164 ಕ್ಕೂ ಹೆಚ್ಚು ಹಾಗೂ ಡಾ. ಎನ್. ರಾಘವೇಂದ್ರ ಅವರು ಸಹ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಂಶೋಧನೆಗಾಗಿ ಕೇಂದ್ರ ಸರ್ಕಾರದಿಂದ 18 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಅನುದಾನ ಬಂದಿದೆ. ಕಾಲೇಜಿನಲ್ಲಿ ಒಂದು ರಿಸರ್ಚ್ ಲ್ಯಾಬ್ ಡೆವಲಪ್ ಮಾಡಲಾಗುತ್ತಿದೆ. ಬಿಎಸ್ಸಿ ಹಾಗೂ ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗುತ್ತಿದೆ. ಬಿಸಿಎ ಕೋರ್ಸ್ ಸಹ ಇದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಸಿಎ ಕೋರ್ಸ್ ಅನ್ನೂ ಪ್ರಾರಂಭಿಸಲಾಗುತ್ತಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪಠ್ಯದ ಜತೆಗೆ ಕ್ರೀಡೆಗೂ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಮಹಾವಿದ್ಯಾಲಯದ ಆರು ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿದ್ದಾರೆ ಎಂದು ಹೇಳಿದರು.

ಈ ಮಹಾವಿದ್ಯಾಲಯದಲ್ಲಿ 34ಕ್ಕೂ ಹೆಚ್ಚಿನ ಸಿಬ್ಬಂದಿ ಪಿಎಚ್​ಡಿ ಪಡೆದಿದ್ದಾರೆ. ಡಿಜಿಟಲ್ ಗ್ರಂಥಾಲಯ, ಎನ್​ಸಿಸಿ, ಔಷಧೀಯ ಸಸ್ಯಗಳ ಉದ್ಯಾನ ಸೇರಿದಂತೆ ಹಲವಾರು ಸೌಲಭ್ಯ ಇರುವ ಮಹಾವಿದ್ಯಾಲಯ ಎ ++ ಶ್ರೇಣಿಯ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.

ಡಾ. ಜಗದೀಶ ಅಂಗಡಿ, ಡಾ. ಎನ್. ರಾಘವೇಂದ್ರ, ಪದವಿ ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ವಿ.ಆರ್. ವಾಘಮೋಡೆ, ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net