ಭಟ್ಕಳದಲ್ಲಿ 15 ಪಾಕಿಸ್ತಾನಿ ಮಹಿಳೆಯರು

Published on

ಭಟ್ಕಳ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ ಹತ್ಯೆಗೈದ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ 48 ಗಂಟೆಯಲ್ಲಿ ಭಾರತ ಬಿಟ್ಟು ತೊಲಗಲು ಆದೇಶ ನೀಡಿರುವುದು ಪಟ್ಟಣದಲ್ಲಿ ವಾಸವಾಗಿರುವ ಪಾಕಿಸ್ತಾನಿ ಪ್ರಜೆಗಳಿಗೆ ಗಡಿಪಾರು ಭೀತಿ ಎದುರಾಗಿದೆ.

ಭಟ್ಕಳದಲ್ಲಿ 15 ಪಾಕಿಸ್ತಾನಿ ಮಹಿಳೆಯರು ಕಳೆದ ಹಲವು ವರ್ಷಗಳಿಂದ ಎಲ್ಟಿವಿ ವೀಸಾದಡಿ ನೆಲೆಸಿದ್ದಾರೆ. ಇವರೆಲ್ಲ ಭಟ್ಕಳದ ಪುರುಷರೊಂದಿಗೆ ವಿವಾಹವಾಗಿ ಪಾಕಿಸ್ತಾನದಿಂದ ಭಟ್ಕಳಕ್ಕೆ ಬಂದು ಗಂಡನ ಮನೆಯಲ್ಲಿ ನೆಲೆಸಿದ್ದಾರೆ. ಭಟ್ಕಳದ ನವಾಯತಿ ಮುಸ್ಲಿಮರು ಅರಬ್ ದೇಶಗಳು ಮಾತ್ರವಲ್ಲದೆ ಪಾಕಿಸ್ತಾನದಲ್ಲಿಯೂ ವ್ಯವಹಾರದ ನಂಟು ಹೊಂದಿದವರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭಟ್ಕಳದಿಂದ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ ಕೆಲವು ನವಾಯತಿ ಮನೆತನದ ಮಕ್ಕಳ ವಿವಾಹ ಭಟ್ಕಳದ ಪುರುಷರೊಂದಿಗೆ ನಡೆದಿದೆ. ಇವರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಇನ್ನೂ ಪೌರತ್ವ ನೀಡಿಲ್ಲ.

ಭಟ್ಕಳದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಚಲನವಲನಗಳ ಮೆಲೆ ವಿಶೇಷ ನಿಗಾ ವಹಿಸಲಾಗಿದೆ. ಅವರು ಭಟ್ಕಳ ಬಿಟ್ಟು ಹೊರಗಡೆ ಹೋಗಲು ಪೊಲೀಸ್ ಅನುಮತಿ ಕಡ್ಡಾಯವಾಗಿದೆ. ಅನಾರೋಗ್ಯ ಕಾರಣ ನೀಡಿ ಚಿಕಿತ್ಸೆಗಾಗಿ ನೆರೆಯ ಜಿಲ್ಲೆಯ ಆಸ್ಪತ್ರೆಗೆ ತೆರಳಲೂ ಪೊಲೀಸ್ ಅನುಮತಿ ಕಡ್ಡಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಗಡಿಪಾರಿಗೆ ಆದೇಶ ನೀಡಿರುವುದು ಎಲ್ಟಿವಿ ವೀಸಾ ಹೊಂದಿದವರಿಗೆ ಅನ್ವಯ ಆಗುವ ಬಗ್ಗೆ ಅಧಿಕೃತ ಆದೇಶ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net