

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರಮುಖ ಮಾರ್ಗಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸುವ ವೈಟ್ ಟಾಪಿಂಗ್ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲು 15 ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 150 ಕಿ.ಮೀ. ಉದ್ದ ರಸ್ತೆಗಳನ್ನು 1,700 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲು ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಈ ಸಂಬಂಧ ವೈಟ್ ಟಾಪಿಂಗ್ ಕಾಮಗಾರಿ ಅನುಷ್ಠಾನ ಕುರಿತು ನಗರದ ಬಿಎಸ್‌ಡಬ್ಲ್ಯುಎಂಎಲ್ ಕಚೇರಿಯಲ್ಲಿ ಮಂಗಳವಾರ ನಡೆದ ಅಂತರ್ ಇಲಾಖೆ ಸಮನ್ವಯ ಸಭೆಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚರ್ಚೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡ ಅವರು, ವೈಟ್ ಟಾಪಿಂಗ್‌ಅನ್ನು 15 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಪೈಕಿ 13 ಪ್ಯಾಕೇಜ್ ಈಗಾಗಲೇ ಅಂತಿಮಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೆರಡು ಪ್ಯಾಕೇಜ್ ಸರ್ಕಾರದ ಹಂತದಲ್ಲಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಸಂಬಂಧ ಜಲಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಂಸ್ಥೆಯ ಕೇಬಲ್ ಮಾರ್ಗ, ಗೇಲ್ ಗ್ಯಾಸ್ ಪೈಪ್ ಲೈನ್‌ಗಳ ಬಡಾವಾಣೆ ಸೇರಿ ಇನ್ನಿತರ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಮುಖ್ಯ ಆಯುಕ್ತರು ಸೂಚಿಸಿದರು.
ರಸ್ತೆಅಗೆತಕ್ಕೆ ಅನುಮತಿ ಇಲ್ಲ:
ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ವೇಳೆ ಏನೇ ಬದಲಾವಣೆ ಇದ್ದಲ್ಲಿ ಸೂಕ್ತವಾದವುಗಳನ್ನು ಅಳವಡಿಸಿಕೊಳ್ಳಬಹುದು. ಜಲಮಂಡಳಿಯಿಂದ ರಸ್ತೆಯ ಮೂಲಕ ಕೊಳವೆ ಅಳವಡಿಸದೆ ಎರಡೂ ಬದಿ ಕೊಳವೆಗಳನ್ನು ಅಳವಡಿಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಅಗೆತಕ್ಕೆ ಅನುಮತಿ ನೀಡುವುದಿಲ್ಲ ಎಂದು ಮುಖ್ಯ ಆಯುಕ್ತರು ವಿವರಿಸಿದರು.
ಈ ವೇಳೆ ಪಾಲಿಕೆಯ ಪ್ರಧಾನ ಅಭಿಯಂತರ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಜಲಮಂಡಳಿ ಮುಖ್ಯ ಅಭಿಯಂತರರಾದ ಗಂಗಾಧರ್, ವೆಂಕಟೇಶ್, ದೇವರಾಜ್, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ಸಂಚಾರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಯುಟಿಲಿಟಿಗೆ ಸಮಗ್ರ ವ್ಯವಸ್ಥೆ:
ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ರಸ್ತೆಗಳ ಎರಡೂ ಬದಿ ಪಾದಚಾರಿ ಮಾರ್ಗದಲ್ಲಿ ಯುಟಿಲಿಟಿಗಾಗಿ ಡಕ್ಟ್‌ಗಳ ಅಳವಡಿಕೆಗಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ಆಯಾ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು.
ಕಾಮಗಾರಿ ಕೈಗೆತ್ತಿಕೊಳ್ಳುವ ಕಡೆ ಸಂಚಾರ ಪೊಲೀಸ್ ವಿಭಾಗದ ಜತೆ ಸಮನ್ವಯ ಸಾಧಿಸಿ ಮಾರ್ಗ ಬದಲಾವಣೆ ಮಾಡಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಹಂತ-ಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ವೈಟ್ ಟಾಪಿಂಗ್ ಯೋಜನೆಯ ಪ್ಯಾಕೇಜ್ ವಿವರ:
ಕಾಮಗಾರಿ ರಸ್ತೆ ಸಂಖ್ಯೆ ರಸ್ತೆ ಉದ್ದ
ಪ್ಯಾಕೇಜ್ - 1 13 15.71 ಕಿ.ಮೀ.
ಪ್ಯಾಕೇಜ್ - 2 11 9.46 ಕಿ.ಮೀ.
ಪ್ಯಾಕೇಜ್ - 3 8 8.05 ಕಿ.ಮೀ.
ಪ್ಯಾಕೇಜ್ - 4 6 9.23 ಕಿ.ಮೀ.
ಪ್ಯಾಕೇಜ್ - 5 8 10.79 ಕಿ.ಮೀ.
ಪ್ಯಾಕೇಜ್ - 7 8 9.22 ಕಿ.ಮೀ.
ಪ್ಯಾಕೇಜ್ - 8 8 8.88 ಕಿ.ಮೀ.
ಸರ್ಕಾರದ ಅನುದಾನ 45 64.62 ಕಿ.ಮೀ.
(2 ಪ್ಯಾಕೇಜ್‌ಗಳು ಇನ್ನಷ್ಟೇ ಅಂತಿಮವಾಗಬೇಕಿದೆ)