ಕೆಎಸ್‌ಆರ್‌ಟಿಸಿ ಹಾಸನ ವಿಭಾಗಕ್ಕೆ 15 ಹೊಸ ಬಸ್

18-02-HNPP 2
ಹೊಳೆನರಸೀಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊಸದಾಗಿ ಬಂದಿರುವ 5 ಅಶ್ವಮೇಧ ಬಸ್‌ಗಳಿಗೆ ಶಾಸಕ ಎಚ್.ಡಿ.ರೇವಣ್ಣ ಹಸಿರು ನಿಶಾನೆ ಪ್ರದರ್ಶಿಸಿ ಸಂಚಾರಕ್ಕೆ ಚಾಲನೆ ನೀಡಿದರು. ದೀಪಕ್‌ಕುಮಾರ್, ಸತೀಶ್, ವೆಂಕಟರಾಮು, ಪ್ರಸನ್ನ, ರವಿಕುಮಾರ್, ಶ್ರೀಧರ್, ಪಾಪನಾಯಕ್ ಇತರರು ಇದ್ದರು.
Published on

ಹೊಳೆನರಸೀಪುರ: ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ 100 ಅಶ್ವಮೇಧ ಬಸ್‌ಗಳನ್ನು ಖರೀದಿಸಿದ್ದು ಇದರಲ್ಲಿ ಹಾಸನ ವಿಭಾಗಕ್ಕೆ 15 ಬಸ್ ನೀಡಿದ್ದು, ಹೊಳೆನರಸೀಪುರ ಘಟಕಕ್ಕೆ 5 ಬಸ್‌ಗಳನ್ನು ನೀಡಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.


ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 5 ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಬಸ್‌ನ ಒಳಗಡೆ ಸೀಟುಗಳ ನಡುವೆ ಅಂತರ ಹೆಚ್ಚಿದೆ. ಬಸ್‌ಗೆ ಜಿಪಿಎಸ್ ಅಳವಡಿಸಿರುವುದರಿಂದ ಬಸ್ ಎಲ್ಲಿದೆ ಎಂಬುದು ಗೊತ್ತಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೂತನ ಬಸ್‌ಗಳನ್ನು ಹೊಳೆನರಸೀಪುರಕ್ಕೆ ನೀಡಲಿದೆ. ಹೊಸದಾಗಿ ಸೇರ್ಪಡೆ ಹೊಂದಿರುವ ಬಸ್‌ಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.


ಜಿಲ್ಲಾ ಸಾರಿಗೆ ಅಧಿಕಾರಿ ದೀಪಕ್‌ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯ ಅಶ್ವಮೇಧ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿವೆ. ಹೊಸದಾಗಿ ಸೇರ್ಪಡೆ ಹೊಂದಿರುವ ಬಸ್‌ಗಳು ಮೈಸೂರು, ಬೆಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ, ಮಂಗಳೂರಿಗೆ ಸಂಚರಿಸಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಡಿಡಿಟಿ ಸತೀಶ್, ಡಿಎಂ ವೆಂಕಟರಾಮು, ಎಸ್‌ಒ ಪ್ರಸನ್ನ, ಲೆಕ್ಕಾಧಿಕಾರಿ ರವಿಕುಮಾರ್, ಶ್ರೀಧರ್, ಹೊಳೆನರಸೀಪುರ ಡಿಪೋ ವ್ಯವಸ್ಥಾಪಕ ಪಾಪನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net