

ಹುಬ್ಬಳ್ಳಿ: ಶುಶ್ರೂಷಾಧಿಕಾರಿಗಳು ಹಾಗೂ ಮಹಿಳೆಯರ ಕುರಿತು ಅವಹೇಳನವಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬ ಆರೋಪದಡಿ ಇಲ್ಲಿಯ ಕಿಮ್ಸ್ನ 15 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತರಗತಿಯಿಂದ ಅಮಾನತಿನಲ್ಲಿಡಲಾಗಿದೆ.
ಈ ರೀಲ್ಸ್ ಕುರಿತು ವಿಚಾರಣೆ ನಡೆಸಲು ತನಿಖಾ ಸಮಿತಿ ರಚಿಸಲಾಗಿದೆ. ಸಮಿತಿ ತನಿಖಾ ವರದಿ ನೀಡುವವರೆಗೆ ವರ್ಗಗಳಿಗೆ ಹಾಜರಾಗದಂತೆ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಅಮಾನತಿನಲ್ಲಿಟ್ಟು ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.
ಏಳು ಸದಸ್ಯರ ಸಮಿತಿ: ಹರಿಬಿಟ್ಟ ವಿಡಿಯೋದ ಕುರಿತು ವಿಚಾರಣೆ ನಡೆಸಲು ಏಳು ಜನ ಸದಸ್ಯರ ಸಮಿತಿ ರಚಿಸಲಾಗಿದೆ. ಶುಶ್ರೂಷಾಧಿಕಾರಿಗಳ ಬಗ್ಗೆ ಅವಹೇಳನವಾಗಿ ಕಿಮ್ಸ್ನ ಎಂಬಿಬಿಎಸ್ ವಿದ್ಯಾರ್ಥಿಗಳು ರೀಲ್ಸ್ ಮಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದು ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ಶುಶ್ರೂಷಾಧಿಕಾರಿಗಳು, ವಿದ್ಯಾರ್ಥಿಗಳು ನಮ್ಮನ್ನು ಅವಮಾನಿಸಿದ್ದಾರೆ ಎಂದು ಕಿಮ್್ಸ ಆಡಳಿತ ಕಚೇರಿ ಎದುರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದ್ದರು.
ರೀಲ್ಸ್ ಮಾಡಿದ್ದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಿಮ್ಸ್ ನಿರ್ದೇಶಕರಿಗೆ ಆಗ್ರಹಿಸಿದ್ದರು. ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ನೇತೃತ್ವದಲ್ಲಿ ಏಳು ಜನ ಸದಸ್ಯರ ಸಮಿತಿ ರಚಿಸಿದ್ದು, ಆ. 11ರೊಳಗೆ ವರದಿ ಸಲ್ಲಿಸಲು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸೂಚಿಸಿದ್ದಾರೆ.
ಕ್ಷಮೆ ಕೋರಿದ ವಿದ್ಯಾರ್ಥಿಗಳು: ವಿಡಿಯೋ ವೈರಲ್ ಆದ ಬಳಿಕ ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷಮೆ ಕೋರಿದ್ದಾರೆ. ರೀಲ್ಸ್ ಮಾಡಿದ್ದು ಮನೋರಂಜನೆಗಾಗಿ. ಆದರೂ ನಾವು ಶುಶ್ರೂಷಾಧಿಕಾರಿಗಳ ಕ್ಷಮೆ ಕೇಳುತ್ತೇವೆ ಎಂದು ವೀಡಿಯೋ ಮೂಲಕ ವಿನಂತಿಸಿದ್ದಾರೆ ಎನ್ನಲಾಗುತ್ತಿದೆ.