

ನರಗುಂದ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವ್ಯಕ್ತಿಯೊಬ್ಬನಿಗೆ 15 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಪಟ್ಟಣದ ಹುಬ್ಬಳ್ಳಿ ರಸ್ತೆಯ ಹಿರೇಹಳ್ಳದ ಬಳಿ ನಡೆದಿದೆ.
ಮೈಸೂರು ಜಿಲ್ಲೆ ಆಲೂರಿನ ಸಂತೋಷ ಮಾನೆ ವಂಚನೆ ಎಸಗಿದ ಆರೋಪಿ. ಮಹಾರಾಷ್ಟ್ರದ ಜಲಾನಾದ ನಿವಾಸಿ ಮಯೂರ ಹೇಮಂತರಾವ್ ಕೋಳೆಶ್ವರ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ.
ಮಹಾರಾಷ್ಟ್ರದ ಕೋ ಆಪರೇಟಿವ್ ಬ್ಯಾಂಕೊಂದರ ನೌಕರನಾಗಿದ್ದ ಮಯೂರ ಅವರನ್ನು ಮೈಸೂರಿನ ಸಂತೋಷ ಮಾನೆ ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದನು. ಇಬ್ಬರು ಆಗಾಗ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು. ಸೆಪ್ಟೆಂಬರ್ ಮೊದಲ ವಾರ ಮಹಾರಾಷ್ಟ್ರದ ಮಯೂರಗೆ ಫೋನ್ ಮಾಡಿದ ಆರೋಪಿ ಸಂತೋಷ ಮಾನೆ ‘ನಮ್ಮ ಮನೆಯ ಅಡಿಪಾಯ ತೆಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಕೇವಲ 15 ಲಕ್ಷ ರೂ.ಗೆ ಅರ್ಧಕೆಜಿ ಚಿನ್ನದ ನಾಣ್ಯ ಕೊಡುತ್ತೇನೆ’ ಎಂದು ನಂಬಿಸಿದ್ದಾನೆ.
ಚಿನ್ನದ ಆಸೆಗೆ ಬಿದ್ದ ಮಯೂರನನ್ನು ಸಂತೋಷ ಸೆ.14 ರಂದು ಹೊಸಪೇಟೆಗೆ ಕರೆಸಿ ಒಂದು ಬಂಗಾರದ ನಾಣ್ಯ ಕೊಟ್ಟಿದ್ದಾನೆ. ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಅಸಲಿ ಚಿನ್ನವೆಂದು ಮಯೂರ ಖಾತ್ರಿಪಡಿಸಿಕೊಂಡಿದ್ದಾನೆ. ಇದಾದ ಬಳಿಕ ಸೆ.17 ರಂದು ನರಗುಂದಕ್ಕೆ ಕರೆಸಿಕೊಂಡು ಅರ್ಧಕೆಜಿ ಚಿನ್ನದ ನಾಣ್ಯಗಳನ್ನು ನೀಡಿರುವ ಸಂತೋಷ ಮಯೂರ್‌ನಿಂದ 15 ಲಕ್ಷ ರೂ. ನಗದು ಪಡೆದು ತನ್ನಿಬ್ಬರು ಸ್ನೇಹಿತರೊಂದಿಗೆ ಪರಾರಿಯಾಗಿದ್ದಾನೆ. ಮಯೂರ ತಮ್ಮೂರಿಗೆ ತೆರಳಿ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ.
ಈ ಕುರಿತು ಸೆ.25 ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ಮಯೂರ ದೂರು ನೀಡಿದ್ದಾನೆ. ಸಿಪಿಐ ಎಸ್.ಎಂ.ಶಿರಗುಪ್ಪಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.