ಜಿಬಿಎಗೆ 15 ಐಎಎಸ್ ಅಧಿಕಾರಿ ಹುದ್ದೆ ಮಂಜೂರು: 5 ಪಾಲಿಕೆ ಕಾರ್ಯನಿರ್ವಹಣೆಗೆ ಸಿಬ್ಬಂದಿ ನಿಗದಿ

bbmp office
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಮಂಗಳವಾರ (ಸೆ.2) ಅಸ್ತಿತ್ವಕ್ಕೆ ಬರಲಿರುವ ಐದು ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ನೆರವಾಗಲು 15 ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ಹುದ್ದೆ ಮಂಜೂರಾತಿ ನೀಡಲಾಗಿದೆ. ಜತೆಗೆ ಕೆಎಎಸ್ ವೃಂದದ 15 ಹುದ್ದೆಗಳೂ ಮಂಜೂರಾಗಿವೆ. ಹಾಲಿ ಬಿಬಿಎಂಪಿಗೆ ಮಂಜೂರಾಗಿದ್ದ ಈ ಹುದ್ದೆಗಳನ್ನು ಪದನಾಮದ ಮರುವಿನ್ಯಾಸ ಮಾಡಿ ಆದೇಶ ಹೊರಡಿಸಲಾಗಿದೆ.

ಜಿಬಿಎಗೆ ಮುಖ್ಯ ಆಯುಕ್ತರು ಆಡಳಿತದ ಪೂರ್ಣ ಅಧಿಕಾರ ಹೊಂದಿರುತ್ತಾರೆ. ನಾಲ್ವರು ವಿಶೇಷ ಆಯುಕ್ತರು ವಿವಿಧ ವಿಭಾಗಗಳ ಮುಖ್ಯಸ್ಥರಾಗಿರುತ್ತಾರೆ. ಹೊಸದಾಗಿ ರಚನೆಯಾಗಿರುವ 5 ಪಾಲಿಕೆಗಳಿಗೆ ತಲಾ ಒಬ್ಬರಂತೆ ಆಯುಕ್ತರು ಮತ್ತು ಅಪರ ಆಯುಕ್ತರ ಹುದ್ದೆಗಳಿರಲಿವೆ. ಐಪಿಎಸ್ ಶ್ರೇಣಿಯ ಇಬ್ಬರು ಅಧಿಕಾರಿಗಳು ಎಡಿಜಿಪಿ ಹಾಗೂ ಎಸ್‌ಪಿ ಹುದ್ದೆ ನಿಭಾಯಿಸಲಿದ್ದಾರೆ.

ಹಾಲಿ ಬಿಬಿಎಂಪಿಯ ಕೇಂದ್ರ ಕಚೇರಿಯು ಜಿಬಿಎ ಆಫೀಸಾಗಿ ಮಾರ್ಪಾಟಾಗಲಿದ್ದು, ಇಲ್ಲಿಯೇ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರು ಕಾರ್ಯನಿರ್ವಹಿಸುತ್ತಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆ ಕೂಡ ಇಲ್ಲಿಯೇ ನಡೆಯಲಿದೆ. ಜಿಬಿಎ ಅಧ್ಯಕ್ಷರೂ ಆದ ಸಿಎಂ ಹಾಗೂ ಉಪಾಧ್ಯಕ್ಷ ಡಿಸಿಎಂ ಅವರು ಆಗಮಿಸಿ ಸಭೆ ನಡೆಸುವವರಿದ್ದು, ಇದಕ್ಕಾಗಿ ಪ್ರತ್ಯೇಕ ಕಚೇರಿಗಳನ್ನು ಸಿದ್ಧಪಡಿಸಲಾಗುತ್ತಿದೆ.

ಅಂತಿಮ ಅಧಿಸೂಚನೆಗೆ ಕ್ಷಣಗಣನೆ:

ಬಿಬಿಎಂಪಿಯನ್ನು ವಿಂಗಡಿಸಿ ಐದು ಹೊಸ ಪಾಲಿಕೆ (ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ) ರಚಿಸಿ ಕಳೆದ ತಿಂಗಳು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಆಹ್ವಾನಿಸಿದ್ದ ಆಕ್ಷೇಪಣೆಗಳನ್ನು ಆಲಿಸಿ ಕೆಲ ಬದಲಾವಣೆಯೊಂದಿಗೆ ಫೈನಲ್ ನೋಟಿಫಿಕೇಷನ್ ಮಂಗಳವಾರ (ಸೆ.2) ಹೊರಡಿಸಲು ಸರ್ಕಾರ ಅಂತಿಮ ಕಸರತ್ತು ನಡೆಸಿದೆ.

ಐದು ಪಾಲಿಕೆಗಳನ್ನು ರಚಿಸುವ ವೇಳೆ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ವಿಧಾನಸಭೆ ಕ್ಷೇತ್ರಗಳನ್ನು 2 ಪಾಲಿಕೆ ವ್ಯಾಪ್ತಿಯಲ್ಲಿ ಅಡಕ ಮಾಡಲಾಗಿತ್ತು. ಇದಕ್ಕೆ ಶಾಸಕರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕೆಲ ಬದಲಾವಣೆಗಳೊಂದಿಗೆ ಅಂತಿಮಗೊಳಿಸಲಾದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಮತಕ್ಷೇತ್ರವನ್ನು ಒಂದೇ ಪಾಲಿಕೆ ಅಡಿಯಲ್ಲಿ ತರಲು ಸಹಮತಮತ ವ್ಯಕ್ತವಾಗಿದ್ದು, ಅಧಿಸೂಚನೆ ಹೊರಬಿದ್ದ ಮೇಲೆ ಸ್ಪಷ್ಟತೆ ಮೂಡಲಿದೆ. ಐದು ಪಾಲಿಕೆಗಳು ಕೂಡ ಸೆ.2ರಿಂದಲೇ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಅಂದೇ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಲಿವೆ.

ಜಿಬಿಎಗೆ ಐಎಎಸ್ ವೃಂದದ ಅಧಿಕಾರಿಗಳ ವಿವರ:

ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ

ವಿಶೇಷ ಆಯುಕ್ತರು (ಆಡಳಿತ, ಕಂದಾಯ, ಐಟಿ ವಿಭಾಗ)

ವಿಶೇಷ ಆಯುಕ್ತರು (ಆರೋಗ್ಯ ಮತ್ತು ಶಿಕ್ಷಣ ವಿಭಾಗ)

ವಿಶೇಷ ಆಯುಕ್ತರು (ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ, ಸಮನ್ವಯ)

ವಿಶೇಷ ಆಯುಕ್ತರು (ಹಣಕಾಸು ಮತ್ತು ಮುಖ್ಯ ಹಣಕಾಸು ಅಧಿಕಾರಿ)

ಆಯುಕ್ತರು, ಕೇಂದ್ರ ಪಾಲಿಕೆ

ಆಯುಕ್ತರು, ಪೂರ್ವ ಪಾಲಿಕೆ

ಆಯುಕ್ತರು, ಪಶ್ಚಿಮ ಪಾಲಿಕೆ

ಆಯುಕ್ತರು, ಉತ್ತರ ಪಾಲಿಕೆ

ಆಯುಕ್ತರು, ದಕ್ಷಿಣ ಪಾಲಿಕೆ

ಅಪರ ಆಯುಕ್ತರು (ಅಭಿವೃದ್ಧಿ), ಕೇಂದ್ರ ಪಾಲಿಕೆ

ಅಪರ ಆಯುಕ್ತರು (ಅಭಿವೃದ್ಧಿ), ಪೂರ್ವ ಪಾಲಿಕೆ

ಅಪರ ಆಯುಕ್ತರು (ಅಭಿವೃದ್ಧಿ), ಪಶ್ಚಿಮ ಪಾಲಿಕೆ

ಅಪರ ಆಯುಕ್ತರು (ಅಭಿವೃದ್ಧಿ), ಉತ್ತರ ಪಾಲಿಕೆ

ಅಪರ ಆಯುಕ್ತರು (ಅಭಿವೃದ್ಧಿ), ದಕ್ಷಿಣ ಪಾಲಿಕೆ

ಐಪಿಎಸ್ ವೃಂದದ ಅಧಿಕಾರಿಗಳು:

ಎಡಿಜಿಪಿ, ಬಿಎಂಟಿಎಫ್​, ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಎಸ್‌ಪಿ, ಬಿಎಂಟಿಎಫ್​, ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಕೆಎಎಸ್ ವೃಂದದ ಅಧಿಕಾರಿಗಳು:

ಅಪರ ಆಯುಕ್ತರು (ಕಂದಾಯ), ಕೇಂದ್ರ ಪಾಲಿಕೆ

ಅಪರ ಆಯುಕ್ತರು (ಕಂದಾಯ), ಪೂರ್ವ ಪಾಲಿಕೆ

ಅಪರ ಆಯುಕ್ತರು (ಕಂದಾಯ), ಪಶ್ಚಿಮ ಪಾಲಿಕೆ

ಅಪರ ಆಯುಕ್ತರು (ಕಂದಾಯ), ಉತ್ತರ ಪಾಲಿಕೆ

ಅಪರ ಆಯುಕ್ತರು (ಕಂದಾಯ), ದಕ್ಷಿಣ ಪಾಲಿಕೆ

ವಲಯ ಜಂಟಿ ಆಯುಕ್ತರು, ಕೇಂದ್ರ ಪಾಲಿಕೆ (2 ಹುದ್ದೆ)

ವಲಯ ಜಂಟಿ ಆಯುಕ್ತರು, ಪೂರ್ವ ಪಾಲಿಕೆ (2 ಹುದ್ದೆ)

ವಲಯ ಜಂಟಿ ಆಯುಕ್ತರು, ಪಶ್ಚಿಮ ಪಾಲಿಕೆ (2 ಹುದ್ದೆ)

ವಲಯ ಜಂಟಿ ಆಯುಕ್ತರು, ಉತ್ತರ ಪಾಲಿಕೆ (2 ಹುದ್ದೆ)

ವಲಯ ಜಂಟಿ ಆಯುಕ್ತರು, ದಕ್ಷಿಣ ಪಾಲಿಕೆ (2 ಹುದ್ದೆ)

ಉಪ ಪೊಲೀಸ್ ಅಧೀಕ್ಷಕರು, ಬಿಎಂಟಿಎಫ್​ (1 ಹುದ್ದೆ)

ಗ್ರೇಟರ್ ಬೆಂಗಳೂರು ಸಂಸ್ಥೆಗಳಿಗೆ ಹುದ್ದೆ ವಿವರ:

ಜಿಬಿಎ 314

ಬಿ-ಸ್ಮೈಲ್ 107

ಕೇಂದ್ರ ಪಾಲಿಕೆ 3,678

ಪೂರ್ವ ಪಾಲಿಕೆ 2,163

ಪಶ್ಚಿಮ ಪಾಲಿಕೆ 6.024

ಉತ್ತರ ಪಾಲಿಕೆ 4,315

ದಕ್ಷಿಣ ಪಾಲಿಕೆ 4,215

ಸಚಿವಾಲಯ ಸಿಬ್ಬಂದಿ 1,851

ವಲಯ/ಫೀಲ್ಡ್ ಸಿಬ್ಬಂದಿ 2,784

ಘನತ್ಯಾಜ್ಯ ನಿರ್ವಹಣಾ ನಿಗಮ 89

ಬಿಎಂಟಿಎಫ್​ 27

ಜಿಬಿಎ ಕಾರ್ಯನಿರ್ವಹಣೆಗೆ ಸಿಬ್ಬಂದಿ ವಿವರ:

ಅಗತ್ಯವಿರುವ ಒಟ್ಟು ಸಿಬ್ಬಂದಿ - 23,689

ಬಿಬಿಎಂಪಿಗೆ ಮಂಜೂರಾತಿ ಹುದ್ದೆ - 22,411

ಬಿಬಿಎಂಪಿಯಲ್ಲಿ ಕಾರ್ಯನಿರತರು - 18,790

ಹೊಸ ವಾರ್ಡ್ ರಚನೆಗೂ ಚಾಲನೆ:

ಹೊಸದಾಗಿ ರಚಿಸಿರುವ 5 ಪಾಲಿಕೆಗಳಲ್ಲಿ ಒಟ್ಟು 450 ವಾರ್ಡ್‌ಗಳನ್ನು ರಚಿಸಲಾಗುತ್ತದೆ. ಆಯಾ ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ ಪರಿಗಣಿಸಿ ಹೊಸದಾಗಿ ವಾರ್ಡ್ ರಚಿಸಲು ಬಿಬಿಎಂಪಿ ವಿಂಗಡಣಾ ಸಮಿತಿಯು ತನ್ನ ಕಾರ್ಯವನ್ನು ವಿಧ್ಯುಕ್ತವಾಗಿ ಆರಂಭಿಸಲಿದೆ. ಪ್ರತಿ ಪಾಲಿಕೆಗಳ ವಾರ್ಡ್ ಸಂಖ್ಯೆ ಕನಿಷ್ಠ 70ರಿಂದ ಗರಿಷ್ಠ 120 ಮೀರದಂತೆ ವಿಂಗಡಿಸಲಾಗುತ್ತದೆ. ಪೂರ್ವ ಪಾಲಿಕೆ ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿರುವ ಕಾರಣ ಆ ಕಾರ್ಪೊರೇಷನ್ ದೊಡ್ಡ ಪಾಲಿಕೆಯಾಗಿ ಹೊರಹೊಮ್ಮಿದೆ. ಪೂರ್ವ ಪಾಲಿಕೆ ಕಡಿಮೆ ವಾರ್ಡ್‌ಗಳಿರಲಿದ್ದು, ಈ ತಿಂಗಳಾಂತ್ಯದೊಳಗೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ಅಕ್ಟೋಬರ್ ಮಧ್ಯ ಭಾಗದಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net