

ಮಂಗಳೂರು: ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ನಲ್ಲಿ ವಂಚನೆ ಮಾಡಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನದ ಬಳಿಯ ನಿವಾಸಿ ಅಹಮ್ಮದ್ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ನಝೀರ್ ನಾಸೀರ್ (39) ಹಾಗೂ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ನಲ್ಲಿ ವಂಚನೆ ಮಾಡಿದ್ದ ಬಜಪೆಯ ಮೊಹಮ್ಮದ್ ಅಶ್ರಫ್ (43) ಹಾಗೂ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹನೀಫ್ (50) ಬಂಧಿತರು.
ಪ್ರಕರಣದ ವಿವರ: ನ್ಯೂ ಶೈನ್ ಎಂಟರ್‌ಪ್ರೈಸಸ್ ಎಂಬ ಲಕ್ಕೀ ಸ್ಕೀಮ್‌ನಲ್ಲಿ 9 ತಿಂಗಳು 1 ಸಾವಿರ ರೂ. ಪಾವತಿಸಿ ಕೊನೇಯ 2 ತಿಂಗಳು 1500 ರೂ. ಹೀಗೆ ಒಟ್ಟು 11 ತಿಂಗಳ ಅವಧಿಗೆ ಹಣ ಸ್ವೀಕರಿಸಿದ್ದರು. ಲಕ್ಕಿ ಸ್ಕೀಮ್ ಹೆಸರಲ್ಲಿ ಆಕರ್ಷಕ ಹಾಗೂ ಬಂಪರ್ ಬಹುಮಾನ ಕಾರು, ಬೈಕ್, ಪ್ಲಾೃಟ್, ಚಿನ್ನ ಕೊಡುವುದಾಗಿ ನಂಬಿಸಿದ್ದರು. ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಮಂದಿಗೆ ಸ್ಕೀಮ್ ಮುಗಿದ ಬಳಿಕ ಬಹುಮಾನ ಅಥವಾ ಕಟ್ಟಿದ ಹಣವನ್ನೂ ನೀಡದರೆ 4.20 ಕೋಟಿ ರೂ. ಅಧಿಕ ವಂಚನೆ ಮಾಡಿದ್ದಾರೆ. ಈ ಬಗ್ಗೆ ಸೂರಿಂಜೆಯ ಶಿವಪ್ರಸಾದ್ ಎಂಬವರು ದೂರು ನೀಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಆ.25ರ ತನಕ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಇವರು ಈ ಹಿಂದೆ ನಡೆಸಿದ ಲಕ್ಕಿ ಸ್ಕೀಮ್‌ನ ಯೋಜನೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ.
ಆರೋಪಿತರ ಪೈಕಿ ಅಹಮ್ಮದ್ ಖುರೇಶಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸೀರ್ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆರೋಪಿತರು ವ್ಯವಹಾರ ನಡೆಸಿದ್ದ ಆಯಿಷಾ ಕಾಂಪ್ಲೆಕ್ಸ್ ನ ಕಛೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಛೇರಿ ಹಾಗೂ ಶೈನ್ ಮಾರ್ಟ್ ಕಛೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್‌ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಯ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ ಹಾಗೂ ಕಂದಾಯ ಇಲಾಖೆಗೆ ಪತ್ರ ವ್ಯವಹಾರವನ್ನು ಮಾಡಲಾಗಿದೆ.
ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್‌ಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆ ನೀಡಲು ಪೊಲೀಸರು ಸೂಚಿಸಿದ್ದಾರೆ.
* 10 ಕೋಟಿ ರೂ. ಅಧಿಕ ವಂಚನೆ
ಇನ್ನೊಂದು ವಂಚನೆ ಪ್ರಕರಣದಲ್ಲಿ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ನಲ್ಲಿ ಪ್ರತೀ ತಿಂಗಳು 1000 ರೂ. ನಂತೆ 1 ವರ್ಷದ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ ಪ್ರತೀ ತಿಂಗಳು ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಯ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ಭರವಸೆ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 10 ಕೋಟಿ ರೂ. ಅಧಿಕ 13 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ, ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಭುಜಂಗ ಎ. ಪೂಜಾರಿ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಬೋಳೂರು ಗ್ರಾಮದ ಮನೆ, ಬಜಪೆಯಲ್ಲಿರುವ ಮನೆ, ಬಜಪೆ ತಾರಿಕಂಬ್ಳದಲ್ಲಿರುವ 5 ಪ್ಲ್ಯಾಟ್ ಗಳು, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುರತ್ಕಲ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕ ರಘುನಾಯಕ, ರಾಘವೇಂದ್ರ ನಾಯ್ಕ, ಜನಾರ್ಧನ ನಾಯ್ಕ, ಶಶಿಧರ ಶೆಟ್ಟಿ, ಎಎಸ್.ಐ ತಾರನಾಥ, ರಾಜೇಶ್ ಆಳ್ವಾ ಹಾಗೂ ಸಿಬ್ಬಂದಿ ರಾಜೇಂದ್ರ ಪ್ರಸಾದ್, ಧನಂಜಯಮೂರ್ತಿ, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ಕುಮಾರ್, ಸಂಜೀವ ಕುಮಾರ್, ಓಂಪ್ರಕಾಶ್ ಬಿಂಗಿ, ಮಂಜುನಾಥ ಆಯಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.