ಕಡಲ್ಕೊರೆತ ತಡೆ ಕಾಮಗಾರಿಗೆ 15 ಕೋಟಿ ರೂ. ಬಿಡುಗಡೆಗೆ ಸಿದ್ಧತೆ: ಸಚಿವ ಮಾಂಕಾಳ ವೈದ್ಯ ಮಾಹಿತಿ

Udp_Beach Visit
Published on

ಪಡುಬಿದ್ರಿ: ರಾಜ್ಯದ ಕರಾವಳಿ ತೀರದಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿಗೆ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ತಲಾ 5 ಕೋಟಿ ರೂ.ನಂತೆ 15 ಕೋಟಿ ರೂ. ಬಿಡುಗಡೆಗೆ ಸಿದ್ಧತೆ ನಡೆದಿದೆ. ಪಡುಬಿದ್ರಿಯ ಕಡಲ್ಕೊರೆತ ಹಾನಿಗೊಳಗಾದ ಪ್ರದೇಶಕ್ಕೆ 1 ಕೋಟಿ ರೂ. ನೀಡುವುದಾಗಿ ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳ ವೈದ್ಯ ಭರವಸೆ ನೀಡಿದರು.

ಪಡುಬಿದ್ರಿ ನಡಿಪಟ್ಣ ಭಾಗದ ಕಡಲ್ಕೊರೆತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಈಗಾಗಲೇ ರಾಜ್ಯದ 320 ಕಿಮೀ ವ್ಯಾಪ್ತಿಯಲ್ಲಿ ಶಾಶ್ವತ ತಡೆಗೋಡೆಗಾಗಿ 480 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದು ಇನ್ನೂ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕರದ ಅನುದಾನ ಬಿಡಗಡೆಗೊಳಿಸುವ ಪ್ರಯತ್ನ ನಡೆಸುತಿದ್ದೇನೆ. ಅದರೊಂದಿಗೆ ವಿಶ್ವಬ್ಯಾಂಕ್ ಅಥವಾ ವಿವಿಧ ಅನುದಾನಗಳನ್ನು ಕ್ರೋಡೀಕರಿಸಿ ಮುಂದೆ ಶಾಶ್ವತ ತಡಗೋಡೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಕಡಲ್ಕೊರೆತದಿಂದ ಅನೇಕ ತೆಂಗಿನಮರಗಳು ಸಮುದ್ರದ ಪಾಲಾಗಿದ್ದು, ನಡಿಪಟ್ಣ ಬ್ಲೂಫ್ಲಾೃಗ್ ಬೀಚ್ ಸಂಪರ್ಕ ರಸ್ತೆಗೂ ಹಾನಿ ಉಂಟಾಗಿದೆ ಕಡಲ್ಕೊರೆತ ತಡೆಗೆ ತಕ್ಷಣದಲ್ಲಿ ಅನುದಾನ ಮಂಜೂರು ಮಾಡುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಚಿವರಿಗೆ ಮನವಿ ಮಾಡಿದರು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ವಿದ್ಯಾಶ್ರೀ, ಯಶೋದಾ, ಜಿಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಮಾಜಿ ಸದಸ್ಯೆ ನೀತಾ ಗುರುರಾಜ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್, ನಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಗಂಗಾಧರ ಕರ್ಕೇರ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಬ್ಲೂಫ್ಲಾೃಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ ಉಪಸ್ಥಿತರಿದ್ದರು.

ಜು.31ರವರೆಗೆ ಭೇಟಿ ನಿರ್ಬಂಧ

ಕಡಲ್ಕೊರೆತದಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂಫ್ಲಾೃಗ್ ಬೀಚ್ ಸಂಪರ್ಕಿಸುವ ಮೀನುಗಾರಿಕಾ ರಸ್ತೆ ಅಪಾಯದಲ್ಲಿದೆ. ಪರಿಣಾಮ ಬ್ಲೂಫ್ಲಾೃಗ್ ಬೀಚ್‌ಗೆ ಜುಲೈ 31ರವರೆಗೆ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಬೀಚ್ ಸಂಪರ್ಕಿಸು ಕಾಂಕ್ರೀಟ್ ರಸ್ತೆ ತಳಪಾಯದ ಮಣ್ಣು ಸಂಪೂರ್ಣ ಕಡಲು ಪಾಲಾಗಿದ್ದು ರಸ್ತೆ ಕಡಿತರ ಅಪಾಯದಲ್ಲಿದೆ. ಅಲ್ಲದೆ ಬೀಚ್ ವ್ಯಾಪ್ತಿಯಲ್ಲಿ ಕಡಲಬ್ಬರವೂ ಜೋರಾಗಿದೆ ಎಂದು ಬೀಚ್ ಪ್ರಬಂಧಕ ವಿಜಯ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net