ತುಮಕೂರು ವಿವಿಗೆ 15 ಎಕರೆ ಜಾಗ: ತೆಂಗು ಕೋರ್ಸ್ ಆರಂಭಕ್ಕೆ ಚಿಂತನೆ

17TMK_TIPTUR_VV
Published on

ತುಮಕೂರು: ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ತಿಪಟೂರಿನಲ್ಲಿ ವಿಶೇಷ ಕೋರ್ಸ್ ಆರಂಭಿಸಲು ತುಮಕೂರು ವಿವಿ ಚಿಂತನೆ ನಡೆಸಿದೆ. ತಿಪಟೂರು ಹೊರವಲಯದ ರಂಗಾಪುರ ಹೊಸಳ್ಳಿ ಸರ್ವೇ ನಂ28ರಲ್ಲಿ ಸರ್ಕಾರ ವಿವಿಗೆ ನೀಡಿರುವ 15 ಎಕರೆ ಭೂಮಿ ಸರ್ವೇ ವೇಳೆ ಸಿಂಡಿಕೇಟ್ ಸದಸ್ಯ ರಾಜು ಈ ಬಗ್ಗೆ ಮಾಹಿತಿ ನೀಡಿದರು. ತಿಪಟೂರು ಸೇರಿ ತೆಂಗು ಸೀಮೆಯ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲು ಸರ್ಕಾರ ಭೂಮಿ ನೀಡಿದ್ದು, ಸದುಪಯೋಗ ಮಾಡಿಕೊಳ್ಳುವ ಹೊಣೆ ವಿವಿ ಮೇಲಿದೆ ಎಂದರು.

ಇದರ ಮೊದಲ ಹಂತವಾಗಿ ಭೂಮಿ ಭದ್ರಪಡಿಸಿಕೊಳ್ಳುವ ಕಾರ್ಯಕ್ಕೆ ಈಗ ಚಾಲನೆ ನೀಡಲಾಗಿದ್ದು, ಭವಿಷ್ಯದಲ್ಲಿ ವಿವಿ ಆಂತರಿಕ ಸಂಪನ್ಮೂಲ ಹಾಗೂ ಸರ್ಕಾರದ ವಿಶೇಷ ಅನುದಾನ ಬಳಸಿಕೊಂಡು ಕ್ಯಾಂಪಸ್ ನಿರ್ಮಿಸುವ ಕನಸಿದೆ ಎಂದರು. ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ಮಾತನಾಡಿ, ವಿವಿಗೆ ಸಂಬಂಧಪಟ್ಟ ಭೂಮಿ ತಿಪಟೂರು ಹಾಗೂ ಶಿರಾ ತಾಲೂಕಿನಲ್ಲಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಶೈಕ್ಷಣಿಕ ವರ್ಷದಿಂದಲೇ ಹೊಸ ಕೋರ್ಸ್ ಆರಂಭಿಸಲು ವಿವಿ ಆಸಕ್ತಿ ವಹಿಸಿದ್ದು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.

ತಿಪಟೂರು ಹಾಗೂ ಸುತ್ತಮುತ್ತಲ ತಾಲೂಕಿನಲ್ಲಿ ತೆಂಗು ಪ್ರಧಾನ ಬೆಳೆಯಾಗಿದ್ದು, ವಿದ್ಯಾರ್ಥಿಗಳಿಗೂ ಸಹಜವಾಗಿಯೇ ತೆಂಗು ಹಾಗೂ ಅದರ ಉತ್ಪನ್ನದ ಬಗ್ಗೆ ಸಾಮಾನ್ಯ ಅರಿವು ಇರುತ್ತದೆ. ಇದನ್ನೇ ಬಳಸಿಕೊಂಡು ಅವರಲ್ಲಿ ಕೌಶಲ ಹೆಚ್ಚಿಸಿದರೆ ಉದ್ಯೋಗದ ಜತೆಗೆ ತೆಂಗಿಗೂ ಬೇಡಿಕೆ ಸೃಷ್ಟಿಯಾಗಲಿದೆ ಎಂದರು.

ಕುಲಸಚಿವ ಗಂಗಾನಾಯ್ಕ ಮಾತನಾಡಿ, ಐದು ವರ್ಷದ ಹಿಂದೆ ಸರ್ಕಾರ ರಂಗಾಪುರ ಸಮೀಪ 15 ಎಕರೆ ಭೂಮಿ ನೀಡಿದ್ದು ನಗರಕ್ಕೆ ಸಮೀಪದಲ್ಲಿಯೇ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಲಾಗುವುದು ಎಂದರು. ಸ್ಥಳೀಯರು ಸಂಪೂರ್ಣ ಸಹಕಾರ ನೀಡಿದ್ದಾರೆ, ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯವಾದ ಸರ್ವೇ ನಡೆಸುತ್ತಿದ್ದಾರೆ ಎಂದರು. ತುಮಕೂರು ವಿವಿ ಅಭಿಯಂತರ ನಾಗರಾಜು, ಸರ್ವೇಯರ್ ಷಡಕ್ಷರಿ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ತುಮಕೂರು ವಿವಿಗೆ ಸಂಬಂಧಪಟ್ಟ 15 ಎಕರೆ ಜಮೀನು ಗಡಿ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಒತ್ತುವರಿಯಾಗಿರುವ ಜಮೀನು ಗುರುತಿಸಿ ಸ್ಥಳೀಯರಿಗೆ ತಿಳಿಹೇಳಲಾಗಿದ್ದು, ಸಹಕಾರ ನೀಡುತ್ತಿದ್ದಾರೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೇಂದ್ರ ನಿರ್ಮಿಸುವ ಕನಸು ತುಮಕೂರು ವಿವಿಗಿದೆ. ಟಿ.ಎಸ್.ಸುನೀಲ್‌ಪ್ರಸಾದ್ ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net