

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ 2022-23ನೇ ಸಾಲಿನಲ್ಲಿ 15.56 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬ್ಯಾಂಕಿನ ಷೇರು ಬಂಡವಾಳ 94.48ಕೋಟಿ ರೂ. ಗಳಿಂದ 110.39ಕೋಟಿ ರೂ.ಗೆ ಏರಿಕೆಯಾಗಿದೆ. ನಿಧಿಗಳು 187.65ಕೋಟಿ ರೂ.ಗಳಿಂದ 242.31 ಕೋಟಿ ರೂ.ಗೆ ಹಾಗೂ ಠೇವುಗಳು 2957.45 ಕೋಟಿ ರೂ.ಗಳಿಂದ 3057.08ಕೋಟಿ ರೂ.ಗೆ ಏರಿದ್ದು ಒಟ್ಟೂ ಆದಾಯ 299.35ಕೋಟಿ ರೂ. ಆಗಿದೆ. ಸಾಲ ಬಾಕಿ 2805.58 ಕೋಟಿ ರೂ.ಗಳಷ್ಟಿದ್ದು ದುಡಿಯುವ ಬಂಡವಾಳ 4098.58 ಕೋಟಿ ರೂ. ತಲುಪಿದೆ.
ಕಳೆದ 17ವರ್ಷಗಳಿಂದ ನಬಾರ್ಡ್ ಮಾರ್ಗಸೂಚಿ ಮೇರೆಗೆ ಕೃಷಿ ಭೂಮಿ ಖರೀದಿ ಬಗ್ಗೆ ವ್ಯವಸಾಯ ಸಾಲದಡಿ ಮಾಧ್ಯಮಿಕ ಸಾಲ ನೀಡಲಾಗುತ್ತಿದೆ ಎಂದರು.
ಸೆ. 16ರಂದು ಬ್ಯಾಂಕಿನ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ. ಪ್ರತಿವರ್ಷ ಸಭೆಯಲ್ಲಿ ಬ್ಯಾಂಕ್ ವತಿಯಿಂದ ನೀಡುವ ಅಜ್ಜಿಬಳ ಪ್ರಶಸ್ತಿ, ಪಂಡಿತ್ ಸುಂದರ್‌ರಾವ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಆದರೆ, ಈ ವರ್ಷದಿಂದ ಸಹಕಾರಿ ಸಪ್ತಾಹದ ಆಚರಣೆ ವೇಳೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಬ್ಯಾಂಕ್ 104ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಬ್ಯಾಂಕ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಜಿಲ್ಲೆಯ ಕೃಷಿಕರೇ ಕಾರಣರಾಗಿದ್ದಾರೆ. ಈ ಹಿಂದೆ ಹಲವು ಬಾರಿ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ಉತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ. 2021-22ನೇ ಸಾಲಿಗೆ ಸಂಬಂಧಿಸಿ ಸಹ ಅಪೆಕ್ಸ್ ಬ್ಯಾಂಕಿನಿಂದ ರಾಜ್ಯಮಟ್ಟದಲ್ಲೇ ಅತ್ಯುತ್ತಮ ಬ್ಯಾಂಕ್ ಎಂದು ಪ್ರಶಸ್ತಿ ಪಡೆದಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಮೋಹನ್ ದಾಸ್ ನಾಯಕ, ಶಿವಾನಂದ ಹೆಗಡೆ, ರಾಘವೇಂದ್ರ ಶಾಸ್ತ್ರಿ, ಎಲ್.ಟಿ. ಪಾಟೀಲ್, ಜಿ.ಆರ್. ಹೆಗಡೆ ಸೋಂದಾ, ಸುರೇಶ್ಚಂದ್ರ ಹೆಗಡೆ, ಕೃಷ್ಣ ದೇಸಾಯಿ, ಆರ್.ಎಂ. ಹೆಗಡೆ, ರಾಮಕೃಷ್ಣ ಹೆಗಡೆ ಕಡವೆ, ತಿಮ್ಮಯ್ಯ ಹೆಗಡೆ, ಪ್ರಕಾಶ ಗುನಗಿ, ಗಜಾನನ ಪೈ, ವಿಶ್ವನಾಥ್ ಭಟ್, ಭೀರಣ್ಣ ನಾಯಕ್, ಆರ್.ಜಿ. ಭಾಗ್ವತ್ ಇತರರು ಇದ್ದರು.