ಮೈಸೂರು: ಜೇನುಗೂಡು ಸಿನಿಮಾ ಬ್ಯಾನರ್‌ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ’ ಚಿತ್ರ ರಾಜ್ಯಾದ್ಯಂತ ಅ.14ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ ವಂಶ ಹೇಳಿದರು.
ಕಾಲೇಜು ವಿದ್ಯಾರ್ಥಿಗಳ ಪ್ರೀತಿ, ಪ್ರೇಮ, ತಂದೆ ತಾಯಿಗಳ ಆದರ್ಶಗಳನ್ನು ಒಳಗೊಂಡ ಮನಮುಟ್ಟುವ ಕಥಾಧಾರಿತ ಚಿತ್ರ ಇದಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸಾಹಿತಿ ಗೌಸ್ ಪೀರ್ ರಚಿಸಿರುವ ಕೇಳ್ರಪ್ರೋ ಕೇಳಿ ಹಾಡು ಈಗಾಗಲೇ ಜೇಂಕಾರ ಮ್ಯೂಸಿಕ್ ಸಂಸ್ಥೆಯ ಯೂಟ್ಯೂಬ್ ಚಾನಲ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದು ಜನಪ್ರಿಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗರಾಜ್ ಭಟ್ ಅವರು ಮತ್ತೊಂದು ಹಾಡು ‘ಮುಂಜಾನೆಯಿಂದ ಇಳಿ ಸಂಜೆವರೆಗೆ’ ಎನ್ನುವ ಯುಗಳ ಗೀತೆ ರಚಿಸಿ ಪ್ರೋತ್ಸಾಹಿಸಿದ್ದಾರೆ. ಚಿತ್ರಕ್ಕೆ ಜೇನುಗೂಡು ಶ್ರೀಧರ್ ಬಂಡವಾಳ ಹೂಡಿದ್ದಾರೆ. ಸಾಯಿ ಕುಮಾರ್, ಸುಧಾರಾಣಿ, ರಘುಪತಿ ಭಟ್ ಹಿರಿಯ ಕಲಾವಿದರ ಜತೆಗೆ ನಾಯಕ ನಟರಾಗಿ ರೋಹಿತ್ ಶ್ರೀಧರ್ ಪ್ರಥಮವಾಗಿ ನಟಿಸಿದ್ದು, ಭಾವನಾ ಶ್ರೀನಿವಾಸ್ ನಾಯಕಿಯಾಗಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಧನಂಜಯ್, ಖ್ಯಾತ ಹಾಸ್ಯ ನಟ ಸಾಧು ಕೋಕಿಲ, ಮಿಮಿಕ್ರಿ ಗೋಪಿ, ಕುರಿ ಬಾಂಡ್ ರಂಗ, ಪಾವಗಡ ಮಂಜು, ವಿನೋದ್ ಗೊಬ್ಬರಗಾಲ ಇತರರು ತಾರಾಬಳಗದಲ್ಲಿ ಇದ್ದಾರೆ ಎಂದರು.
ನಟರಾದ ರೋಹಿತ್ ಶ್ರೀಧರ್, ಧನಂಜಯ್, ನಟಿ ಭಾವನಾ ಶ್ರೀನಿವಾಸ್, ಜೀವಿತ ವಸಿಷ್ಠ ಇದ್ದರು.