

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರಣಿಕೋತ್ಸವ ಫೆ.14ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಜಾತ್ರೆಯ ಧಾರ್ಮಿಕ ವಿಧಿವಿಧಾನಗಳಿಗೆ ಫೆ.4 ರಂದು ಚಾಲನೆ ಸಿಕ್ಕಿದೆ. ಫೆ.14 ರವರೆಗೆ ಗೊರವಪ್ಪ ಹಾಗೂ ಮೈಲಾರ ಲಿಂಗೇಶ್ವರನ ಮೂರ್ತಿ ಡೆಂಕನಮರಡಿಯಲ್ಲಿದ್ದು. ಕಾರಣಿಕೋತ್ಸವದ ಕೊನೆಯ ದಿನ ಫೆ.15 ರಂದು ದೇಗುಲದ ಆವರಣದಲ್ಲಿ ಕಂಚಿವೀರರು, ಗೊರವಪ್ಪರಿಂದ ಭಕ್ತರನ್ನು ರೋಮಾಂಚನಗೊಳಿಸುವ ಸರಪಳಿ, ಬಗಣಿ ಗೂಟ ಪವಾಡ ನಡೆಯಲಿವೆ.
ಕಾರಣಿಕ ನುಡಿಯುವ ಗೊರವಪ್ಪ ಡೆಂಕನಮರಡಿಯಲ್ಲಿದ್ದು, ರಥಸಪ್ತಮಿಯಿಂದ 11 ದಿನ ಭಂಡಾರ ನೀರು, ಹಾಲು ಹಣ್ಣು ಸೇವಿಸಿ ವ್ರತಾಚರಣೆ ಮಾಡುತ್ತಾರೆ. ಫೆ.14 ರಂದು ಬಿಲ್ಲನ್ನು ಏರಿ ಮೈಲಾರಲಿಂಗೇಶ್ವರನ ಕಾರಣಿಕ ನುಡಿಯುತ್ತಾರೆ. ಕಾರಣಿಕೋತ್ಸವ ಹಿನ್ನೆಲೆಯಲ್ಲಿ ಭಕ್ತರು ಪಾದಯಾತ್ರೆ, ಎತ್ತಿನಬಂಡಿಗಳ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ದೇಶ ಹಾಗೂ ರಾಜ್ಯದ ರಾಜಕೀಯ, ಆರ್ಥಿಕ, ಕೃಷಿ ಸೇರಿದಂತೆ ಇತರ ಕ್ಷೇತ್ರಗಳ ಬೆಳವಣಿಗೆ ಕುರಿತು ಕಾರಣಿಕವನ್ನು ವಿಶ್ಲೇಷಿಸಲಾಗುತ್ತದೆ.