

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಡಿಸೆಂಬರ್ 14ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರಚಂಡ ರಾವಣ ಎಂಬ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ರಾಮಘಟ್ಟ ತಿಳಿಸಿದರು.
ರಂಗ ನಿರ್ದೇಶಕ, ಕೀರ್ತನಕಾರರಾದ ದಿವಂಗತ ಡಾ. ರಂಗಪ್ಪದಾಸ್ ಇವರ 2ನೇ ವರ್ಷದ ನೆನಪು ಕಾರ್ಯಕ್ರಮವು ಡಿ.14ರಂದೇ ನಡೆಯಲಿದೆ. ನಟ ಭಯಂಕರ ಎಂಬ ಬಿರುದು ಪಡೆದ ದಿವಂಗತ ವಜ್ರಮುನಿ ಅಭಿನಯಿಸಿರುವ ದಿ. ಕಣಗಾಲ್ ಪ್ರಭಾಕರ್ ಶಾಸ್ತ್ರಿ ವಿರಚಿತ, ವೀರಭದ್ರಾಚಾರ್ ಗಾಡೇನಹಳ್ಳಿ ಇವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರಚಂಡ ರಾವಣ ಸಿನಿಮಾ ಮಾದರಿಯಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. 9 ಗಂಟೆಗಳ ಕಾಲ ಇರುವ ನಾಟಕವನ್ನು 3 ಗಂಟೆಗೆ ಇಳಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ಶ್ರೇಯಸ್ ಪಟೇಲ್ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೀತಂ ಜೆ. ಗೌಡ, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಇತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಲಿಂಗೇಗೌಡ ಕದಾಳು, ಕಾರ್ಯದರ್ಶಿ ನಿರಂಜನ್ ಹಂಚೂರು, ಗೌರವಾಧ್ಯಕ್ಷ ಗೋವಿಂದೇಗೌಡ, ನಿರ್ದೇಶಕಿ ರಾಣಿ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಇತರರು ಉಪಸ್ಥಿತರಿದ್ದರು.