14ಕ್ಕೆ ಮೆಗಾ ಲೋಕ ಅದಾಲತ್

8CKD1-Web
ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸಭಾಭವನದಲ್ಲಿ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟಿ. ಶ್ರೀಕಾಂತ, ವಿಜಯಕುಮಾರ ಬಾಗಡೆ, ಅಶೋಕ ಆರ್.ಎಚ್ ಇದ್ದರು.
Published on

ಚಿಕ್ಕೋಡಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಚಿಕ್ಕೋಡಿ ನ್ಯಾಯಾಲಯಗಳ ಆವರಣಗಳಲ್ಲಿ ಜು.14 ರಂದು ಮೆಗಾ ಲೋಕ ಅದಾಲತ್ ಅಯೋಜಿಸಲಾಗಿದೆ ಎಂದು 7ನೇ ಹೆಚ್ಚುವರಿ ಜಿಲ್ಲಾನ್ಯಾಯಾಧೀಶ
ಎಸ್.ಎಲ್. ಚವ್ಹಾಣ ತಿಳಿಸಿದರು.

ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿಯಾಗಿ, ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆದಿಲ್ಲ. ಹೀಗಾಗಿ ಅನೇಕ ವ್ಯಾಜ್ಯಗಳು ಇತ್ಯರ್ಥವಾಗಿಲ್ಲ. ಲೋಕ ಅದಾಲತ್ ನಡೆಸುವ ಮೂಲಕ ನನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳಲು ಮೆಗಾ ಲೋಕ ಅದಾಲತ್ ಉತ್ತಮ ವೇದಿಕೆಯಾಗಿದೆ. ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಎಂಡಿಆರ್ ಪ್ರಕರಣ, ಚೆಕ್ ಅಮಾನ್ಯ ಪ್ರಕರಣ, ಬ್ಯಾಂಕ್ ಸಾಲದ ವಸೂಲಾತಿ ಪ್ರಕರಣ, ಮೋಟಾರು ವಾಹನ ಅಪಘಾತ ಪರಿಹಾರ, ನ್ಯಾಯಾಧೀಕರಣದ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ಭೂಸ್ವಾಧೀನ ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ನ್ಯಾಯಾಲಯಗಳಲ್ಲಿ ಎರಡು ಕಡೆಯವರಿಗೆ ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ವಿವಾದ ಅಂತ್ಯವಾಗಲಿದೆ. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿಮಾಡಿಕೊಳ್ಳಬಹುದು.

ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಮಾಹಿತಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಪ್ರಧಾನ ಹಿರಿಯ ನ್ಯಾಯಾಧೀಶ ಟಿ. ಶ್ರೀಕಾಂತ, ವಿಜಯಕುಮಾರ ಬಾಗಡೆ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಅಶೋಕ ಆರ್.ಎಚ್., 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ನಾಗೇಶ ಪಾಟೀಲ, ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ, ಎಜಿಪಿ ಚಿಕ್ಕೋಡಿ ಆರ್. ಐ.ಖೋತ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಲ್. ವಿ.ಬೋರಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net