

ಶೃಂಗೇರಿ: ಶ್ರೀ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ 74ನೇ ವರ್ಧಂತಿ ಮಹೋತ್ಸವ ಏ.14ರಂದು ನಡೆಯಲಿದೆ.
ವರ್ಧಂತಿ ನಿಮಿತ್ತ ಏ.9ರಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಅಂದು ಬೆಳಗ್ಗೆ 8ಕ್ಕೆ ಶ್ರೀ ಮಠದ ಆವರಣದಲ್ಲಿ ಲಕ್ಷಮೋದಕ ಗಣಪತಿ ಹವನ ನಡೆಯಲಿದೆ. 10ರಂದು ಬೆಳಗ್ಗೆ 8ಕ್ಕೆ ಮಹಾರುದ್ರ ಹಾಗೂ ಸಹಸ್ರ ಚಂಡಿಕಾ ಮಹಾಯಾಗಕ್ಕೆ ಸಂಕಲ್ಪ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮೀಜಿ ಅವರಿಗೆ ಅಧಿಷ್ಠಾನ ಮಂದಿರದಲ್ಲಿ ವಿಶೇಷ ಪೂಜೆಯನ್ನು ಜಗದ್ಗುರುಗಳು ನೆರವೇರಿಸಲಿದ್ದಾರೆ. 13ರ ಬೆಳಗ್ಗೆ 11.30ಕ್ಕೆ ಈಶ್ವರಗಿರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಿರಿಯ ಶ್ರೀಗಳಿಂದ ವಿಶೇಷ ಪೂಜೆ ಜರುಗಲಿದೆ. 14ರ ಬೆಳಗ್ಗೆ 7ಕ್ಕೆ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಅಹ್ನಿಕ ದರ್ಶನ ನೆರವೇರಲಿದ್ದು, 11.30ಕ್ಕೆ ಮಹಾರುದ್ರ ಯಾಗದ ಪೂರ್ಣಾಹುತಿ, 12ಕ್ಕೆ ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ವಿಶೇಷಪೂಜೆ, 12.30ಕ್ಕೆ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ, ಸಂಜೆ 6ಕ್ಕೆ ಗುರುವಂದನೆ ಹಾಗೂ ಶ್ರೀಗಳಿಂದ ಅನುಗ್ರಹ ಭಾಷಣ ನೆರವೇರಲಿದೆ.