4 ಕಾಳಜಿ ಕೇಂದ್ರಗಳಲ್ಲಿ 149 ಜನ ಆಶ್ರಯ

HNR Rain
Published on

ಹೊನ್ನಾವರ: ನಿರಂತರ ಮಳೆಯಿಂದ ತಾಲೂಕಿನ ಗುಂಡಬಾಳ ನದಿ ಉಕ್ಕಿ ಹರಿದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಚಿಕ್ಕನಕೋಡ, ಗುಂಡಿಬೈಲ, ಹಾಡಗೇರಿ, ಹುಡಗೋಡ, ಕೆಂಚಗಾರ, ಗುಂಡಬಾಳದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು. ಜಿಲ್ಲಾಡಳಿತದ ನಿರ್ದೇಶನದಲ್ಲಿ ತಾಲೂಕಿನ ಕಂದಾಯ ಅಧಿಕಾರಿಗಳು ಕಾಳಜಿ ಕೇಂದ್ರ ತೆರೆದು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಗುಂಡಿಬೈಲ ನಂ.1 ಶಾಲೆಯ ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಉಳಿದ ಕಾಳಜಿ ಕೇಂದ್ರಗಳಿಗೆ ಜನರು ತೆರಳಿದ್ದು ರಾತ್ರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಚಿಕ್ಕನಕೋಡದಲ್ಲಿ 2, ಗುಂಡಬಾಳ ಗ್ರಾಮದಲ್ಲಿ 1 ಮತ್ತು ಹೆಬೈಲ್ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 65 ಕುಟುಂಬಗಳ 149 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ 10 ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಚಿಕ್ಕನಕೋಡ ಗ್ರಾಪಂ ವ್ಯಾಪ್ತಿಯ ಗುಂಡಬಾಳ ನಂ.2 ಶಾಲೆ, ಗುಂಡಿಬೈಲ್ ನಂ.1 ಶಾಲೆ, ಗುಂಡಿಬೈಲ್ ನಂ.2 ಶಾಲೆ, ಕೆಂಚಗಾರ ಶಾಲೆ, ಖರ್ವಾ ಗ್ರಾಪಂ ವ್ಯಾಪ್ತಿಯ ವಲ್ಕಿಯ ಇತ್ತಿಹಾದ್ ಶಾಲೆ, ಮಂಕಿ ಗ್ರಾಪಂ ವ್ಯಾಪ್ತಿಯ ಅರಲೆ ಶಾಲೆ, ಗಂಜಿಕೇರಿ ಶಾಲೆ, ಕಡತೋಕ ಗ್ರಾಪಂ ವ್ಯಾಪ್ತಿಯ ಹೂಜಿಮುರಿ ಶಾಲೆ, ಹೆಬಳೆಕೊಪ್ಪ ಶಾಲೆ, ಅನಿಲಗೋಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ತಿಳಿಸಿದರು.

ಗುಡ್ಡ ಕುಸಿದು ಹೆದ್ದಾರಿ ಬಂದ್

ಹೊನ್ನಾವರ ತಾಲೂಕಿನ ಭಾಸ್ಕೇರಿ ಸಮೀಪದ ವರ್ನಕೆರೆ ಬಳಿ ಎನ್‌ಎಚ್ 69ರಲ್ಲಿ ಗುಡ್ಡ ಕುಸಿದು ಕೆಲ ಕಾಲ ಸಂಚಾರ ಬಂದ್ ಆಗಿತ್ತು. ಗುಡ್ಡದ ಮಣ್ಣಿನ ಜತೆಗೆ ಮರಗಳು ಹೆದ್ದಾರಿಯ ಮೇಲೆ ಉರುಳಿವೆ. ಸ್ಥಳೀಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಮರಗಳನ್ನು ಸರಿಸಿ, ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net