

ತುಮಕೂರು : ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು ಮಂಗಳವಾರ 149 ಜನರಿಗೆ ಸೋಂಕು ದೃಢವಾಗಿದೆ. ನಾಲ್ವರು ಮೃತಪಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 24, ಗುಬ್ಬಿ 5, ಕೊರಟಗೆರೆ 4, ಕುಣಿಗಲ್ 6, ಮಧುಗಿರಿ 8, ಪಾವಗಡ 31, ಶಿರಾ 6, ತಿಪಟೂರು18, ತುಮಕೂರು 37 ಹಾಗೂ ತುರುವೇಕೆರೆಯಲ್ಲಿ 10 ಜನರಿಗೆ ಸೇರಿ ಒಟ್ಟು 149 ಪ್ರಕರಣ ಪತ್ತೆಯಾಗಿವೆ. ಪಾವಗಡ, ಗುಬ್ಬಿ ಹಾಗೂ ತಿಪಟೂರಿನಲ್ಲಿ ತಲಾ ಒಬ್ಬರು ಗರ್ಭಿಣಿಯರಿಗೆ ಸೋಂಕು ದೃಢವಾಗಿದೆ.
90 ಪುರುಷರು, 59 ಮಹಿಳೆಯರಿಗೆ ಕರೊನಾ ವಕ್ಕರಿಸಿದ್ದು ಐದು ವರ್ಷದೊಳಗಿನ 1 ಮಗು, 60 ವರ್ಷ ಮೇಲ್ಪಟ್ಟ 27 ಜನರಿಗೆ ಸೋಂಕು ದೃಢವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಟೆಸ್ಟ್‌ಗೆ ಒತ್ತಾಯ ಕೇಳಿಬಂದಿದೆ.
ಸೋಂಕಿಗೆ ಮಂಗಳವಾರ ನಾಲ್ವರು ಮೃತಪಟ್ಟಿದ್ದು ತುಮಕೂರು ನಗರದಲ್ಲಿ 3, ಪಾವಗಡದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ತುಮಕೂರಿನ ಭವಾನಿನಗರದ 60 ವರ್ಷದ ವ್ಯಕ್ತಿ, ಪಿ.ಎಚ್.ಕಾಲನಿಯ 56 ವರ್ಷದ ವ್ಯಕ್ತಿ, ಜೈಪುರದ 47 ವರ್ಷದ ಮಹಿಳೆ ಹಾಗೂ ಪಾವಗಡದ 65 ವರ್ಷದ ವ್ಯಕ್ತಿಯನ್ನು ಕರೊನಾ ಬಲಿತೆಗೆದುಕೊಂಡಿದೆ.
1,061 ಸಕ್ರಿಯ ಪ್ರಕರಣ: 99 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು ಜಿಲ್ಲೆಯಲ್ಲಿ 3353 ಗುಣಮುಖರಾಗಿದ್ದಾರೆ, 143 ಮಂದಿ ಮೃತಪಟ್ಟಿದ್ದಾರೆ, ಐಸಿಯುನಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 1,061 ಸಕ್ರಿಯ ಪ್ರಕರಣಗಳಿವೆ.
ಕ್ಷೌರಿಕನಿಗೆ ಸೋಂಕು ಗ್ರಾಮದಲ್ಲಿ ಆತಂಕ: ತುಮಕೂರು ತಾಲೂಕು ಹೆಬ್ಬೂರಿನಲ್ಲಿ ಸೋಂಕಿತರ ಸಂಖ್ಯೆ 14ಕ್ಕೇರಿದೆ. ಮಂಗಳವಾರ ಕ್ಷೌರಿಕರೊಬ್ಬರಿಗೆ ಸೋಂಕು ದೃಢವಾಗಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡುಮಾಡಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ 8 ಹಾಗೂ ದ್ವಿತೀಯ ಸಂಪರ್ಕದಲ್ಲಿ ಕ್ಷೌರ ಮಾಡಿಸಿಕೊಂಡ ಸಾಕಷ್ಟು ಜನರು ಇದ್ದಾರೆ. ಕಳೆದೊಂದು ವಾರದಲ್ಲಿ 8 ಹೊಸ ಪ್ರಕರಣಗಳು ಪತ್ತೆಯಾಗಿದ್ದು 6 ಸಕ್ರಿಯ ಪ್ರಕರಣಗಳಿವೆ ಈಗಾಗಲೇ 7 ಜನರು ಗುಣಮುಖರಾಗಿದ್ದಾರೆ.
ಮಾರ್ಗಸೂಚಿ ಆಧರಿಸಿ ಶಾಲೆ ಆರಂಭ?: ಶಾಲೆ, ಕಾಲೇಜು ಆರಂಭದ ಸೂಚನೆ ಕಾಣಿಸದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇರುವ ಕಡೆಗಳಲ್ಲಿಯೇ ತೆರಳಿ ಸಿದ್ಧ ಪ್ರಶ್ನೆಗಳಿಗೆ ಉತ್ತರ ಬರೆಸಿಕೊಳ್ಳುವ ಕೆಲಸ ಶಿಕ್ಷಕರ ಕಡೆಗಳಿಂದ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿಯೂ ಆನ್‌ಲೈನ್ ಮೂಲಕ ಶಾಲೆ ಹಾಗೂ ಕಿರುಪರೀಕ್ಷೆ ನಡೆಸಲಾಗುತ್ತಿದ್ದು ಸರ್ಕಾರದ ಮಾರ್ಗಸೂಚಿಯಂತೆ ಶಾಲೆ ಆರಂಭದ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿದೆ.