

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ 7, ಪುತ್ತೂರು ಹಾಗೂ ಬೆಳ್ತಂಗಡಿಯ ತಲಾ ಒಬ್ಬರು ಹಾಗು ಇನ್ನೊಬ್ಬರು ಇತರ ಜಿಲ್ಲೆಗೆ ಸೇರಿದವರು. ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 79 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ.
ಉಳಿದಂತೆ ಬಂಟ್ವಾಳ 16, ಬೆಳ್ತಂಗಡಿ 21,ಪುತ್ತೂರು 20 ಮತ್ತು ಸುಳ್ಯದ ಒಬ್ಬರ ವರದಿ ಪಾಸಿಟಿವ್ ಬಂದಿದೆ. 12 ಮಂದಿ ಹೊರ ಜಿಲ್ಲೆಯವರು. 82 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 3,343 ಸಕ್ರಿಯ ಪ್ರಕರಣಗಳಿದ್ದು, 3,009 ಮಂದಿ ಸೋಂಕುಮುಕ್ತರಾಗಿದ್ದಾರೆ. ಇದುವರೆಗೆ ಮೃತಪಟ್ಟವರ ಸಂಖ್ಯೆ 190ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೆ 6,542 ಮಂದಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕಾಸರಗೋಡಿನಲ್ಲಿ 128 ಮಂದಿಗೆ ಸೋಂಕು: ಜಿಲ್ಲೆಯ 128 ಮಂದಿ ಸಹಿತ ಕೇರಳದಲ್ಲಿ ಬುಧವಾರ 1195 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಕಳೆದ 24 ತಾಸುಗಳಲ್ಲಿ ರಾಜ್ಯದಲ್ಲಿ ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ.
ಮಾಸ್ಕ್ ಧರಿಸದಿದ್ದರೆ 200 ರೂ.ದಂಡ
ಸಾರ್ವಜನಿಕ ಹಾಗೂ ಕೆಲಸದ ಸ್ಥಳಗಳಲ್ಲಿ, ಪ್ರಯಾಣದ ಸಮಯದಲ್ಲಿ ಮುಖ ಕವಚ ಧರಿಸುವುದು ಕಡ್ಡಾಯ. ತಪ್ಪಿದಲ್ಲಿ ನಗರ ಪ್ರದೇಶಗಳಲ್ಲಿ 200 ರೂ. ಮತ್ತು ಉಳಿದ ಪ್ರದೇಶಗಳಲ್ಲಿ 100 ರೂ.ದಂಡ ವಿಧಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಎಚ್ಚರಿಕೆ ನೀಡಿದ್ದಾರೆ.
ಬೆಳ್ತಂಗಡಿ ಶಾಸಕರಿಗೂ ಪಾಸಿಟಿವ್ ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಕರೊನಾ ಪಾಸಿಟಿವ್ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣದಿಂದ ಸ್ವಯಂ ಕ್ವಾರಂಟೈನ್‌ನಲ್ಲಿರುವುದಾಗಿ ಕೆಲದಿನಗಳ ಹಿಂದೆ ತಿಳಿಸಿದ್ದ ಅವರು ಬುಧವಾರ ಸಾಯಂಕಾಲ ತನಗೆ ಸೋಂಕು ತಗುಲಿರುವುದನ್ನು ಫೇಸ್‌ಬುಕ್‌ನಲ್ಲಿ ಖಚಿತಪಡಿಸಿದ್ದಾರೆ. ಸ್ವಲ್ಪ ಜ್ವರವಿದ್ದು, ತಪಾಸಣೆಗೊಳಪಟ್ಟಾಗ ಪಾಸಿಟಿವ್ ಬಂದಿದೆ. ಬೇರೆ ರೋಗ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದೇನೆ, ನನ್ನ ಸಂಪರ್ಕಕ್ಕೆ ಕೆಲದಿನಗಳಲ್ಲಿ ಬಂದಿರುವವರು ಕ್ವಾರಂಟೈನ್‌ನಲ್ಲಿದ್ದು ಜಾಗ್ರತೆ ವಹಿಸುವಂತೆ ಶಾಸಕರು ತಿಳಿಸಿದ್ದಾರೆ.
ಸ್ವಾತಂತ್ರೃ ದಿನಾಚರಣೆ ಸಂದರ್ಭ ಸಾರ್ವಜನಿಕರು ದೈಹಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಸಬೇಕು. ನೆಹರು ಮೈದಾನದಲ್ಲಿ ಜಿಲ್ಲಾಮಟ್ಟದ ಧ್ವಜಾರೋಹಣ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಧ್ವಜಾರೋಹಣ ನೇರಪ್ರಸಾರ ಮಾಡಲಾಗುತ್ತದೆ. ಕರೊನಾ ಸಮಯದಲ್ಲಿ ಉತ್ತಮ ರೀತಿ ಕೆಲಸ ನಿರ್ವಹಿಸಿದವರನ್ನು ಸನ್ಮಾನಿಸಲಾಗುವುದು. - ಡಾ.ಕೆ.ವಿ.ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ