ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ನ 144 ನೇ ವಾಷಿ೯ಕ ಮಹಾಸಭೆ

144th Annual General Meeting of Kodagu Plants Association
Published on

ಮಡಿಕೇರಿ:

ಜಾಗತಿಕವಾಗಿ ಭಾರತೀಯ ಕಾಫಿಗೆ ಬೇಡಿಕೆ ಮತ್ತು ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ (ಉಪಾಸಿ) ವಿವಿಧ ಕಾಫಿ ಸಂಸ್ಥೆಗಳ ಸಹಕಾರದಲ್ಲಿ ಇಂಡಿಯನ್ ಕಾಫಿ ಬ್ರಾಂಡ್ ರೂಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಉಪಾಸಿಯ ಅಧ್ಯಕ್ಷ ಸಿ. ಶ್ರೀಧರನ್ ಹೇಳಿದರು. ಮಡಿಕೇರಿಯಲ್ಲಿ ಮಂಗಳವಾರ ನಡೆದ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ೧೪೪ನೇ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ವಿಶ್ವದ ಪ್ರಮುಖ ಕಾಫಿ ಕೆಫೆ ಸಂಸ್ಥೆಗಳು ಭಾರತದಲ್ಲಿ ಕೆಫೆ ಪ್ರಾರಂಭಿಸುತ್ತಿವೆ. ಕಾಫಿ ಜಗತ್ತಿನಲ್ಲಿ ಭಾರತದ ಕಾಫಿಯೂ ಗುರುತಿಸಲ್ಪಡುತ್ತಿದೆ.

ಬೆಂಗಳೂರಿನಲ್ಲಿ ಕಳೆದ ತಿಂಗಳು ಆಯೋಜಿತ ವಿಶ್ವಕಾಫಿ ಸಮ್ಮೇಳನ ಕೂಡ ಜಾಗತಿಕವಾಗಿ ಭಾರತೀಯ ಕಾಫಿಗೆ ಒಳ್ಳೆಯ ಪ್ರಚಾರ ದೊರಕುವಂತೆ ಮಾಡಿದೆ. ಉಪಾಸಿ ಸಂಸ್ಥೆ ಇದೀಗ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಇಂಡಿಯನ್ ಕಾಫಿ ಎಂಬ ಬ್ರಾಂಡ್ ಮೂಲಕ ಭಾರತೀಯ ಕಾಫಿಗೆ ಜಾಗತಿಕ ಬೇಡಿಕೆ ಮತ್ತು ಮಾನ್ಯತೆ ದೊರಕಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಟೀ ಬೆಳೆಗೆ ಹೆಚ್ಚು ಅವಕಾಶಗಳಿದ್ದರೂ ವೈವಿಧ್ಯಮಯ ಟೀ ಉತ್ಪನ್ನಗಳಿಂದಾಗಿ ಟೀಯನ್ನು ಇಂಡಿಯನ್ ಟೀ ಎಂದು ಬ್ರಾಂಡ್ ಮಾಡಲು ಕಷ್ಟಸಾಧ್ಯ. ಆದರೆ ಕಾಫಿ ಇದಕ್ಕೆ ಹೊರತಾಗಿದ್ದು, ಕೊಲಂಬಿಯನ್, ಮೆಕ್ಸಿಕನ್ ಕಾಫಿ ರೀತಿಯಲ್ಲಿಯೇ ವಿಶ್ವದಲ್ಲಿ ಇಂಡಿಯನ್ ಕಾಫಿ ಎಂದು ಬ್ರಾಂಡ್ ಮಾಡಲು ಸುಲಭವಾಗಲಿದೆ. ಆದರೆ ಕಾಫಿ ಕೃಷಿಕರು ತಾವು ಬೆಳೆಯುವ ಕಾಫಿಯ ಗುಣಮಟ್ಟದತ್ತ ಗಮನ ಹರಿಸಿದರೆ ಮಾತ್ರ ಇಂಡಿಯನ್ ಕಾಫಿಗೆ ಬ್ರಾಂಡ್ ದೊರಕಲು ಸಾಧ್ಯವಾಗುತ್ತದೆ.

ಪ್ರಸ್ತುತ ಭಾರತದಲ್ಲಿ ಬೆಳೆಸಲಾಗುತ್ತಿರುವ ೩.೫೦ ಲಕ್ಷ ಮೆಟ್ರಿಕ್ ಟನ್ ಕಾಫಿಯಲ್ಲಿ ೯೦ ಸಾವಿರ ಮೆಟ್ರಿಕ್ ಟನ್ ಕಾಫಿ ಆಂತರಿಕವಾಗಿ ಬಳಸಲ್ಪಡುತ್ತಿದ್ದು ಉಳಿದ ೨.೬೦ ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತು ವಹಿವಾಟಿನಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ೮೦ ಸಾವಿರ ಕೋಟಿ ರೂ. ವರಮಾನ ಲಭಿಸುತ್ತಿದೆ. ರಫ್ತು ಮಾಡಲಾಗುವ ಕಾಫಿಯಲ್ಲಿ ಈಗಿನಿಂದಲೇ ಶೇ.೫ ರಷ್ಟು ಕಾಫಿಗೆ ಬ್ರಾಂಡ್ ಮಾಡುವ ಗುರಿ ಹೊಂದಬೇಕಾಗಿದೆ ಎಂದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು. ಅಶೋಕ್ ಮಾತನಾಡಿ, ಮಾನವ - ವನ್ಯಜೀವಿ ಸಂಘರ್ಷ ಕೊಡಗಿನಲ್ಲಿ ಎಲ್ಲೆ ಮೀರಿದ್ದು ಶಾಶ್ವತ ಪರಿಹಾರ ದೊರಕದಿದ್ದರೆ ತೋಟ ನಿರ್ವಹಣೆಯೇ ಹೊರೆಯಾಗಲಿದೆ. ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸೂಕ್ತ ಪರಿಹಾರವನ್ನು ವನ್ಯಜೀವಿ ಸಂಘರ್ಷದಲ್ಲಿ ಸಂತ್ರಸ್ತರಾದವರಿಗೆ ನೀಡಬೇಕು. ಕರಿಮೆಣಸು, ಅಡಕೆ ಬೆಳೆಗಳಂತೆಯೇ ಕಾಫಿ ಕೃಷಿಯನ್ನೂ ಕೇಂದ್ರ ಸರ್ಕಾರ ಬೆಳೆ ವಿಮೆ ಪರಿಹಾರ ಯೋಜನೆಯಡಿ ತರಬೇಕು. ಕೊಡಗಿನಲ್ಲಿ ಬೆಳೆಗಾರರು ಎದುರಿಸುತ್ತಿರುವ ಪೌತಿ ಖಾತೆ ವರ್ಗಾವಣೆ ಸಂಬಂಧಿತ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಬೇಕಾಗಿದೆ ಎಂದರು.

ಸಿಎಸ್ ಐ ಆರ್ ಮತ್ತು ಸಿಎಫ್ ಟಿಆರ್ ಐ ನ ನಿವೃತ್ತ ಹಿರಿಯ ಪ್ರಧಾನ ವಿಜ್ಞಾನಿ ಡಾ.ಕೆ.ಎ.ಅನು ಅಪ್ಪಯ್ಯ ಮಾತನಾಡಿ, ಕಾಫಿ ಹಸ್ಕ್ ಸೇರಿದಂತೆ ಕಾಫಿಯ ವಿವಿಧ ಅಂಶಗಳನ್ನು ಬಳಸಿ ತಯಾರಿಸಬಹುದಾದ ಇತರ ಉತ್ಪನ್ನಗಳ ಬಗ್ಗೆಯೂ ಕಾಫಿ ಉದ್ಯಮ ಚಿಂತನೆ ಹರಿಸಬೇಕಾಗಿದೆ. ಚಿಕೋರಿ ರಹಿತ ಕಾಫಿ ಬಳಕೆ ಮೂಲಕ ಆರೋಗ್ಯ ವೃದ್ಧಿಯ ಬಗ್ಗೆ ಪ್ರತೀಯೋರ್ವರೂ ಜಾಗ್ರತಿ ವಹಿಸಬೇಕಾಗಿದೆ. ತಂಪು ಪಾನೀಯ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳಲ್ಲಿರುವ ಆರೋಗ್ಯಕ್ಕೆ ಮಾರಕವಾದ ವಿಷಕಾರಿ ಪದಾರ್ಥಗಳ ಬಗ್ಗೆ ಯಾರೂ ಉತ್ಪನ್ನಗಳ ಖರೀದಿ ಸಂದರ್ಭ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿಯೇ ನಾವು ಉಪಯೋಗಿಸುವ ಬಹುತೇಕ ಆಹಾರೋತ್ಪನ್ನಗಳಿಂದ ವಿಷಯುಕ್ತ ಪದಾರ್ಥಗಳು ನಮ್ಮ ದೇಹವನ್ನು ಸೇರುತ್ತಿದೆ. ಕೊಡಗಿನಲ್ಲಿ ಮಾರಾಟವಾಗುತ್ತಿರುವ ಹೋಂಮೇಡ್ ವೈನ್ ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಖಂಡಿತವಾಗಿಯೂ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ರೀತಿ ಹೋಂಮೇಡ್ ವೈನ್ ತಯಾರಿಸುವುದೇ ಅಕ್ರಮವಾಗಿದ್ದು ಇದನ್ನು ಮಾರಾಟಕ್ಕೆ ಹೇಗೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಕೆ. ಬೆಳ್ಯಪ್ಪ, ಉಪಾಧ್ಯಕ್ಷ ಎ.ನಂದಬೆಳ್ಯಪ್ಪ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net