

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ಸಹಕಾರ ಬಹಳ ಮುಖ್ಯ. ಅಂತೆಯೇ ಎಲ್ಲರ ಸಹಕಾರದಿಂದ 1980ರಲ್ಲಿ ಪ್ರಾರಂಭವಾದ ಓಬಳಾಪುರ ಡೇರಿ ಸುಸಜ್ಜಿತವಾದ ಕಟ್ಟಡ ಹೊಂದಿ, ಪ್ರಗತಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ಹೋಬಳಿಯ ಓಬಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ರೈತರು ಆರ್ಥಿಕ ಸ್ಥಿತಿ ವೃದ್ಧಿಗೆ ಹೈನುಗಾರಿಕೆ ಅವಲಂಬಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 183 ಡೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 98 ಸಾವಿರ ಲೀಟರ್ ಹಾಲು ಶೇಕರಣೆ ಆಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಸದಸ್ಯರು ಸಂಘದಲ್ಲಿದ್ದಾರೆ. ಸಂಘದ ಎಲ್ಲ ಪದಾಧಿಕಾರಿಗಳ ಹೆಚ್ಚಿನ ಶ್ರಮ, ತ್ಯಾಗದಿಂದ ಉತ್ತಮವಾದ ಕಟ್ಟಡ ನಿರ್ಮಾಣವಾಗಿದೆ ಎಂದರು.
ಶಾಸಕರ 10 ಲಕ್ಷ ರೂ. ಅನುದಾನ, ನಮ್ಮ ಎಲ್ಲ ಹಾಲು ಉತ್ಪಾದಕರ ಸಹಕಾರದಿಂದ ಮತ್ತು ಕೆಎಂಎಫ್‌ನಿಂದ 4.5 ಲಕ್ಷ ರೂ., ಬಮುನಿಂದ 4.5 ಲಕ್ಷ ರೂ. ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ. ಅನುದಾನ ಮತ್ತು ಸ್ಥಳೀಯ ಮುಖಂಡರ ನೆರವಿನಿಂದ ಒಟ್ಟು 39.5 ಲಕ್ಷ ಮೊತ್ತದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿದೆ ಎಂದು ಡೇರಿ ಅಧ್ಯಕ್ಷ ನಾಗರಾಜು ಹೇಳಿದರು.
ಕರೊನಾದಿಂದ ರೈತರು ಕಷ್ಟದಲ್ಲಿದ್ದು, ಸರ್ಕಾರ ರೈತರಿಗೆ ಹಾಲಿನ ಖರೀದಿ ಮೊತ್ತವನ್ನು ಹೆಚ್ಚಿಸಿ ಸಹಾಯ ನೀಡಬೇಕು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡಿ, ಅದನ್ನು ನಮ್ಮ ಡೇರಿಗೆ ಸರಬರಾಜು ಮಾಡುವುದರಿಂದ ಸಹಕಾರ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು. ನೆಲಮಂಗಲ ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಹಾಗೂ ನೆಲಮಂಗಲ ಶಿಬಿರದ ಉಪ ವ್ಯವಸ್ಥಾಪಕ ಡಾ.ಗೋಪಾಲಗೌಡ ಭೇಟಿ ನೀಡಿ, ಶುಭ ಹಾರೈಸಿದರು.
ವಿಸ್ತರಣಾಧಿಕಾರಿ ಆದರ್ಶ್, ಚಂದನ್, ಡೇರಿ ನಿರ್ದೇಶಕರಾದ ಜೆ.ಮಂಜುನಾಥ್, ಎಸ್.ಗಂಗಾಧರ್, ಆರ್.ನರಸಿಂಹಮೂರ್ತಿ, ಎಲ್.ಹನುಮಂತರಾಜು, ಜಿ.ರಾಮಚಂದ್ರ, ಬಿ.ನಾರಾಯಣಪ್ಪ, ಬಿ.ಗಂಗಯ್ಯ, ಚನ್ನಯ್ಯ, ಹರೀಶ್ ಕುಮಾರ್, ಎಚ್.ರಾಜಣ್ಣ, ಪುಷ್ಪಲತಾ ಎನ್.ಕಾರಾಳಪ್ಪ, ಸಿದ್ದಗಂಗಮ್ಮ, ಸಿಇಒ ಕೇಶವಮೂರ್ತಿ, ಮುಖಂಡರಾದ ಕಾಶೀಪತಯ್ಯ, ವಿಜಯಕುಮಾರ್, ನಟರಾಜು, ರಂಗಸ್ವಾಮಿ, ರಮೇಶ್, ಗಂಗಾಧರ್, ಕಾರಾಳಪ್ಪ, ಮಣ್ಣೆ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತುರಾಜ್ ಇದ್ದರು.