

ಬೆಂಗಳೂರು: ವಿಧಾನಮಂಡಲ ಅಧಿವೇಶನ ಡಿ.7ರಿಂದ 15ವರೆಗೆ ನಡೆಯಲಿದ್ದು, ವಿಧಾನಸೌಧ ಸುತ್ತ 2 ಕಿಲೋ ಮೀಟರ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿಷೇಧಾಜ್ಞೆ ವಿಧಿಸಿದ್ದಾರೆ. ಡಿ.7ರಿಂದ 15ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶಕ್ಕೆ ಅಡ್ಡಿ ಉಂಟಾಗದಂತೆ ಸುಗಮವಾಗಿ ನಡೆಸಬೇಕಾಗಿದೆ. ಈ ವೇಳೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಧರಣಿ, ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ 2 ಕಿ.ಮೀಟರ್ ಅಧಿವೇಶನ ನಡೆಯಲಿರುವ ದಿನದಂದು ಬೆಳಗ್ಗೆ 6 ರಿಂದ ತಡರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಭೆಗಳನ್ನು ನಡೆಸುವಂತಿಲ್ಲ. ಮಾರಕಾಸ್ತ್ರ, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಸಾಗಿಸುವಂತಿಲ್ಲ. ಶವ, ಪ್ರತಿಕೃತಿಗಳ ಪ್ರದರ್ಶನ, ರ‌್ಯಾಲಿ, ಭಿತ್ತಿ ಪತ್ರ ಪ್ರದರ್ಶನ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.