1411 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ

Totagarike hani
Published on

ವಿಜಯವಾಣಿ ಸುದ್ದಿಜಾಲ ಬೀದರ್

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ 1411 ಹೆಕ್ಟೇರ್ (3527 ಎಕರೆ)ಯಲ್ಲಿ ಸಮೃದ್ಧವಾಗಿ ಬಂದಿದ್ದ ಹಣ್ಣು, ತರಕಾರಿ (ತೋಟಗಾರಿಕೆ) ಬೆಳೆಗಳು ಹಾನಿಗೀಡಾಗಿವೆ. ಅತಿವೃಷ್ಟಿಯಿಂದ ಕಟಾವಿಗೆ ಬಂದಿದ್ದ ಶುಂಠಿ ಬೆಳೆಗೆ ಭಾರಿ ಹೊಡೆತ ಬಿದ್ದಿದ್ದು, ರೈತರು ಕಂಗಾಲಾಗಿದ್ದಾರೆ.

ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾದ್ಯಂತ ಅತಿವೃಷ್ಟಿ ಹಾನಿ ಕುರಿತು ಸಮೀಕ್ಷೆ ನಡೆಸಲಾಗಿದ್ದು, 1411 ಹೆಕ್ಟೇರ್ ನಲ್ಲಿದ್ದ ವಿವಿಧ ಬೆಳೆಗಳು ನೀರುಪಾಲು ಆಗಿರುವುದು ಗೊತ್ತಾಗಿದೆ. ಬೀದರ್ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾದರೆ, ನಂತರದ ಸ್ಥಾನದಲ್ಲಿ ಬಸವಕಲ್ಯಾಣ ಇದೆ. ಹುಲಸೂರು ತಾಲೂಕಿನಲ್ಲಿ ಕಡಿಮೆ ಬೆಳೆ ನಷ್ಟವಾಗಿದೆ. ಶುಂಠಿ, ಟೊಮ್ಯಾಟೊ, ಪಪ್ಪಾಯಿ, ಬಾಳೆಗೆ ಹೆಚ್ಚು ಹಾನಿಯಾಗಿದ್ದು, ಕೈತುಂಬ ಆದಾಯ ತರಬಹುದೆಂಬ ರೈತರ ಮೇಲೆ ಬರೆ ಎಳೆದಿದೆ.

ಬೀದರ್ ತಾಲೂಕಿನಲ್ಲಿ 483 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಲ್ಲಿ ಶುಂಠಿ 350, ಟೊಮ್ಯಾಟೊ 45, ಪಪ್ಪಾಯಿ 10 ಹೆಕ್ಟೇರ್ ಸೇರಿ ಇತರ ಬೆಳೆಗಳು ಸೇರಿವೆ. ಬಸವಕಲ್ಯಾಣ ತಾಲೂಕಿನಲ್ಲಿ 148 ಹೆಕ್ಟೇರ್ ಶುಂಠಿ, 52 ಟೊಮ್ಯಾಟೊ, 59 ಪಪ್ಪಾಯಿ, 36 ಬಾಳೆ, 47 ಹೆಕ್ಟೇರ್ ಮೆಣಸಿನಕಾಯಿ ಸೇರಿ 393 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಭಾಲ್ಕಿ ತಾಲೂಕಿನಲ್ಲಿ ಸುಂಠಿ 68 ಹೆಕ್ಟೇರ್, 25 ಟೊಮ್ಯಾಟೊ ಸೇರಿ 206 ಹೆಕ್ಟೇರ್ ಬೆಳೆ ನೀರುಪಾಲಾಗಿದೆ. ಕಮಲನಗರ ತಾಲೂಕಿನಲ್ಲಿ ಶುಂಠಿ 30 ಸೇರಿ 159 ಹೆಕ್ಟೇರ್ ಬೆಳೆ ನಾಶವಾಗಿದೆ. ಚಿಟಗುಪ್ಪ 56, ಹುಮನಾಬಾದ್ 54, ಔರಾದ್ 34 ಹಾಗೂ ಹುಲಸೂರು ತಾಲೂಕಿನಲ್ಲಿ 26 ಹೆಕ್ಟೇರ್ ಪ್ರದೇಶದಲ್ಲಿದ್ದ ಹಣ್ಣು, ತರಕಾರಿ ಬೆಳೆಗಳು ನಾಶವಾಗಿವೆ.

ಜಿಲ್ಲೆಯ ಬಹುತೇಕ ಕಡೆ ಈ ತಿಂಗಳ ಎರಡನೇ ವಾರದಿಂದ ಸುರಿದ ಸತತ ಮಳೆಯಿಂದ ಅಧಿಕ ಬೆಳೆ ಹಾನಿಯಾಗಿದೆ. ಸರ್ಕಾರದ ನಿರ್ದೇಶನದಂತೆ ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ಸಮಗ್ರ ವರದಿ ಸಲ್ಲಿಸಿದ್ದಾರೆ. ಈ ವರದಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸರ್ಕಾರದ ನೆರವು ಯಾವಾಗ ಸಿಗುತ್ತದೆಯೋ ಎಂದು ರೈತರು ಕಾದು ಕುಳಿತಿದ್ದಾರೆ.

ಹಾನಿ ಪ್ರಮಾಣ ಹೆಚ್ಚಲಿದೆ
ಸದ್ಯದ ಸಮೀಕ್ಷೆ ಪ್ರಕಾರ 1411 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಆದರೆ ಜಿಲ್ಲೆಯ ಬಹುತೇಕ ಕಡೆ ಮತ್ತೆ ಮೇಲಿಂದ ಮೇಲೆ ಮಳೆ ಬರುತ್ತಿರುವ ಕಾರಣ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಸಮೀಕ್ಷೆ ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ನಷ್ಟು ಹಣ್ಣು, ತರಕಾರಿ ಬೆಳೆ ಹಾನಿ ಬಗ್ಗೆ ಅಂದಾಜಿಸಲಾಗಿದೆ. ಮಳೆ ಪೂರ್ಣ ನಿಂತ ನಂತರವೇ ಹಾನಿ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ.

ಶುಂಠಿ ಬೆಳೆಗೆ ಹೆಚ್ಚಿನ ಪೆಟ್ಟು
ಅತಿವೃಷ್ಟಿಯು ಜಿಲ್ಲಾದ್ಯಂತ ಶುಂಠಿ ಬೆಳೆಗೆ ಹೆಚ್ಚಿನ ಪೆಟ್ಟು ಕೊಟ್ಟಿದೆ. ಸಮೃದ್ಧವಾಗಿ ಬಂದಿದ್ದ ಶುಂಠಿ ಕೈಗೆ ಬರುವ ಮುನ್ನವೇ ನೀರುಪಾಲಾಗಿದೆ. ತೋಟಗಾರಿಕೆ ಬೆಳೆಗಳ ಹಾನಿಯಲ್ಲಿ ಅರ್ಧದಷ್ಟು ಪಾಲು ಶುಂಠಿಯದ್ದಾಗಿದ್ದು, 643 ಹೆಕ್ಟೇರ್ ಹಾನಿಯಾಗಿದೆ. ಬೀದರ್ ತಾಲೂಕಿನಲ್ಲಿ 350 ಹೆಕ್ಟೇರ್, ಬಸವಕಲ್ಯಾಣ 148, ಭಾಲ್ಕಿ 68, ಕಮಲನಗರ 30 ಹೆಕ್ಟೇರ್, ಹುಮನಾಬಾದ್, ಚಿಟಗುಪ್ಪದಲ್ಲಿ ತಲಾ 22 ಹೆಕ್ಟೇರ್, ಔರಾದ್ ನಲ್ಲಿ 2 ಹೆಕ್ಟೇರ್ ಶುಂಠಿ ಹಾನಿಗೀಡಾಗಿದೆ ಎಂದು ಸಮೀಕ್ಷಾ ವರದಿ ಅಂಕಿ ಅಂಶ ವಿವರಿಸಿವೆ. ಶುಂಠಿಗೆ ಉತ್ತಮ ಬೆಲೆ ಇದ್ದು, ಕರೊನಾ ಕಷ್ಟದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬ ರೈತರ ನಿರೀಕ್ಷೆಗಳೆಲ್ಲವೂ ವರುಣಾರ್ಭಟ ಹುಸಿಗೊಳಿಸಿದೆ. ಬಂಪರ್ ಬೆಳೆ ಮಣ್ಣು ಪಾಲಾಗಿದ್ದರಿಂದ ರೈತರು ಘಾಸಿಗೊಂಡಿದ್ದಾರೆ.

  • ತಾಲೂಕುವಾರು ಹಾನಿ (ಹೆಕ್ಟೇರ್ ಗಳಲ್ಲಿ)
  • ಬೀದರ್ : 483
  • ಬಸವಕಲ್ಯಾಣ : 393
  • ಭಾಲ್ಕಿ : 206
  • ಕಮಲನಗರ : 159
  • ಚಿಟಗುಪ್ಪ : 56
  • ಹುಮನಾಬಾದ್ : 54
  • ಔರಾದ್ : 34
  • ಹುಲಸೂರು : 26
  • ಒಟ್ಟು : 1411

ಲಾಕ್ ಡೌನ್ ನಲ್ಲಿ ಹಣ್ಣು, ತರಕಾರಿ
ಪೂರೈಕೆಗೆ ಜಿಲ್ಲಾಡಳಿತ ಮೆಚ್ಚುಗೆ

ಲಾಕ್ ಡೌನ್ ವೇಳೆ ನಗರದಲ್ಲಿ ಸಮರ್ಪಕವಾಗಿ ಹಣ್ಣು, ತರಕಾರಿ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಜಿಲ್ಲಾ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ನಿಲಾಂಜನ್ ಅಬ್ರಾಹಂ ಅವರಿಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅಭಿನಂದನಾ ಪತ್ರ ನೀಡಿದ್ದಾರೆ. ಮಾರ್ಚ್ ನಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಾಪ್ಕಾಮ್ಸ್ ವಾಹನ ಮೂಲಕ ನಾಗರಿಕರಿಗೆ ಹಣ್ಣು ಮತ್ತು ತರಕಾರಿ ಪೂರೈಸಲಾಗಿದೆ. ಈ ಸಾಧನೆಗೆ ಜಿಲ್ಲಾಡಳಿತ ನಿಮ್ಮನ್ನು ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ವೇಳೆಯಿಂದ ಈವರೆಗೆ ವಾಯುಪಡೆ ವಸತಿ ಗೃಹಗಳಿಗೂ ಹಣ್ಣು, ತರಕಾರಿ ಸರಬರಾಜು ಮಾಡಿದ್ದರಿಂದ ಏರ್ಫೋಸ್೯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ನೀಡಿದ್ದಾರೆ.

ಲಾಕ್ ಡೌನ್ ನಂತರದ ಬರೆ
ಏಪ್ರಿಲ್, ಮೇ ತಿಂಗಳಲ್ಲಿ ಕರೊನಾ ನಿಯಂತ್ರಣ ಸಂಬಂಧ ಹೇರಿದ್ದ ಲಾಕ್ ಡೌನ್ ವೇಳೆ ಹಣ್ಣು, ತರಕಾರಿ ಮಾರಾಟವಾಗದೆ ಭಾರಿ ಪ್ರಮಾಣದಲ್ಲಿ ಹಾಳಾಗಿತ್ತು. ಈ ಆಘಾತ ಮರೆಯುವಷ್ಟರಲ್ಲೇ ಅತಿವೃಷ್ಟಿ ಬರೆ ಎಳೆದಿದೆ. ಲಾಕ್ ಡೌನ್ ವೇಳೆ ಜಿಲ್ಲೆಯಲ್ಲಿ ಸಮೃದ್ಧವಾಗಿ ಬಂದಿದ್ದ 1000 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿನ ಕಲ್ಲಂಗಡಿ ಹಾಳಾಗಿತ್ತು. ಬೇರೆಡೆ ಮಾರಾಟವಾಗದೆ ಹಾಗೂ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದ್ದರಿಂದ ಟನ್ ಗಟ್ಟಲೆ ಕಲ್ಲಂಗಡಿ ಹೊಲದಲ್ಲೇ ಕೊಳೆಯುವಂತಾಗಿತ್ತು. ಇದರೊಂದಿಗೆ ವಿವಿಧ ತರಕಾರಿ ಸಹ ಮಾರಾಟ ಆಗದೆ ರೈತರಿಗೆ ಭಾರಿ ನಷ್ಟ ಉಂಟಾಗಿತ್ತು. ಆರು ತಿಂಗಳಲ್ಲೇ ಎರಡನೇ ಸಲ ರೈತರಿಗೆ ಬೆಳೆ ನಷ್ಟದ ಪೆಟ್ಟು ಬಿದ್ದಿರುವುದು ದಿಕ್ಕುತೋಚದಂತೆ ಮಾಡಿದೆ.

ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆ ಹಾನಿ ಕುರಿತು ಜಿಲ್ಲಾದ್ಯಂತ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ. ಮತ್ತೆ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಮುಂದುವರಿಸಲಾಗಿದೆ. ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.| ಮಲ್ಲಿಕಾರ್ಜುನ ಬಾವಗೆತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net