14 ವರ್ಷ ಗತಿಸಿದರೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಿಗದ ಸ್ವಾಯತ್ತೆ!

DSC_9414
Published on

ಮಂಜುನಾಥ ಟಿ.ಭೋವಿ ಮೈಸೂರು

ಕಣ್ತೆರೆದು 14 ವರ್ಷ ಗತಿಸಿದರೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಇನ್ನೂ ಸ್ವಾಯತ್ತತೆ ಸ್ಥಾನಮಾನ ದೊರೆತಿಲ್ಲ. ಶಾಶ್ವತ ಸೂರು ಸಹ ಸಿಕ್ಕಿಲ್ಲ. ಈ ವಿಷಯದಲ್ಲಿ ಸಾಧನೆ ದೊಡ್ಡ ಸೊನ್ನೆ!


ಕನ್ನಡ ಭಾಷೆಗೆ ‘ಶಾಸ್ತ್ರೀಯತೆ’ ಮಾನ್ಯತೆ ದೊರೆತು ಸೋಮವಾರಕ್ಕೆ 14 ವರ್ಷ ಪೂರೈಸಿ, 15ನೇ ವರ್ಷಕ್ಕೆ ಕಾಲಿಟ್ಟಿದ್ದು, 67ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಶಾಸ್ತ್ರೀಯ ಕನ್ನಡ ಕೇಂದ್ರದ ಸ್ಥಿತಿಗತಿ ನೋಡಿದರೆ ಅಯ್ಯೋ ಎನಿಸುತ್ತದೆ. ಸ್ವಂತ ಅಸ್ತಿತ್ವ ದೊರೆಯದ ಕಾರಣಕ್ಕೆ ಇದು ಆರಕ್ಕೇರದ ಮೂರಕ್ಕಿಳಿಯದ ಅಯೋಮಯ ಸ್ಥಿತಿಯಲ್ಲಿ ಹೊಯ್ದಡುತ್ತಿದೆ.


ಚ್ಛಾಶಕ್ತಿ ಕೊರತೆ:

ದೇಶದ ಭಾಷೆಗಳ ಪಾಲಿಗೆ ಪ್ರಯೋಗ ಶಾಲೆಯಾದ ನಗರದಲ್ಲಿರುವ ಭಾರತೀಯ ಭಾಷಾ ಸಂಸ್ಥಾನದಿಂದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಮೋಕ್ಷ ಕೊಡಿಸಲು ಸಾಧ್ಯವಾಗಿಲ್ಲ. ಪಂಜರದ ಬಲೆಯಲ್ಲಿ ಬಂಧಿಯಾಗಿರುವ ಈ ಕೇಂದ್ರವನ್ನು ಹೊರತಂದು ಇದಕ್ಕೆ ಸಂಪೂರ್ಣ ಸ್ವಾಯತ್ತತೆಯ ಅಧಿಕಾರ ನೀಡಿದರೆ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ. ಇಲ್ಲದಿದ್ದರೆ, ಈ ಕೇಂದ್ರ ನಿಂತ ನೀರಿನ ಸ್ಥಿತಿಯಲ್ಲೇ ಮುಂದುವರಿಯಲಿದೆ. ಆದ್ದರಿಂದ ಈ ಕೇಂದ್ರಕ್ಕೆ ಬಿಡುಗಡೆ ಭಾಗ್ಯ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂಬುದು ಭಾಷಾ ತಜ್ಞರು ಹಾಗೂ ಸಾಹಿತಿಗಳ ಅಭಿಪ್ರಾಯವಾಗಿದೆ. ಆದರೆ, ಇದು ಇನ್ನೂ ಗಗನ ಕುಸುಮವೇ ಆಗಿ ಉಳಿದಿದೆ. ಬಹುವರ್ಷಗಳ ಈ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಜತೆಗೆ, ರಾಜ್ಯ ಸರ್ಕಾರವೂ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.

ಇನ್ನೂ ಬಾಲ್ಯಾವಸ್ಥೆ:
2004ರಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರ ಸರ್ಕಾರ ನೀಡಿತ್ತು. ಬಳಿಕ ತಡಮಾಡದೆ ತಮಿಳು ಅಧ್ಯಯನ ಕೇಂದ್ರವನ್ನು ಮೈಸೂರಿನ ಸಿಐಐಎಲ್‌ನಿಂದ ಚೆನ್ನೈಗೆ ವರ್ಗಾಯಿಸಿಕೊಳ್ಳಲಾಯಿತು. 76 ಕೋಟಿ ರೂ.ಗಳಲ್ಲಿ 17 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಶಾಸ್ತ್ರೀಯ ತಮಿಳು ಭಾಷಾ ಕೇಂದ್ರ ನಿರ್ಮಿಸಲಾಗಿದೆ. ಕೋಟ್ಯಂತರ ರೂ. ಅನುದಾನದಲ್ಲಿ ತಮಿಳು ಭಾಷೆಯ ಕುರಿತು ಸಾಕಷ್ಟು ಅಧ್ಯಯನ ಇನ್ನಿತರ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತದೆ. ಆದರೆ, ಕನ್ನಡ ಕೇಂದ್ರ ಇನ್ನೂ ಬಾಲ್ಯಾವಸ್ಥೆಯಲ್ಲೇ ನರಳುತ್ತಿದೆ.

ಏನು ಲಾಭ?:
ಸ್ವಾಯತ್ತೆ ಸಿಕ್ಕರೆ ಹೆಚ್ಚಿನ ಅಧಿಕಾರ, ಅನುದಾನ, ಸೌಲಭ್ಯಗಳು, ಅಧಿಕಾರಿಗಳು, ಸಿಬ್ಬಂದಿ ಲಭ್ಯವಾಗಲಿದೆ. ಜತೆಗೆ, ಸ್ವಂತ ಅಸ್ತಿತ್ವ ದೊರೆಯಲಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ಕನ್ನಡದ ಕೆಲಸ ಕಾರ್ಯಗಳಿಗೆ ವೇಗಸ್ಪರ್ಶ ಸಿಗಲಿದೆ. ಕೇಂದ್ರದಿಂದ ಕನ್ನಡ ಭಾಷಾ ಅಭಿವೃದ್ಧಿ ಕೆಲಸಗಳು ಸುಗಮವಾಗಿ ಸಾಗಲಿವೆ. ಇಲ್ಲವಾದರೆ, ಇದು ಉದ್ಧಾರವಾಗುವುದು ಕಷ್ಟಕರ ಎನಿಸಿದೆ.

ತಾತ್ಕಾಲಿಕ ಕಟ್ಟಡವೇ ಗತಿ:

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಇನ್ನೂ ಸ್ವಂತ ಸೂರಿಲ್ಲ. ಹೀಗಾಗಿ, ಇದಕ್ಕೆ ತಾತ್ಕಾಲಿಕ ಕಟ್ಟಡವೇ ಗತಿಯಾಗಿದೆ. 2018ರಲ್ಲಿ ಸರಸ್ವತಿಪುರಂನಲ್ಲಿರುವ ಮೈವಿವಿಗೆ ಸೇರಿದ ಕಟ್ಟಡಕ್ಕೆ ಈ ಕೇಂದ್ರ ವರ್ಗಾವಣೆಗೊಂಡಿತು. ಆದರೆ, ಸ್ಥಳಾವಕಾಶದ ಕೊರತೆಯಿಂದ ಮಾನಸಗಂಗೋತ್ರಿಯ ಮೈವಿವಿ ರಾಷ್ಟ್ರೀಯ ವಿಜ್ಞಾನ ಇತಿಹಾಸ ಕೇಂದ್ರದ ಕಟ್ಟಡದಲ್ಲಿರುವ ಒಂದು ಮಹಡಿಗೆ ಸ್ಥಳಾಂತರಗೊಂಡಿದೆ. ಸದ್ಯಕ್ಕೆ ಸಿಐಐಎಲ್‌ನ ಹಿಡಿತದಲ್ಲೇ ಇದೆ.

ಶಾಶ್ವತ ಸೂರಿಲ್ಲ:
ಈ ಕೇಂದ್ರಕ್ಕೆ 5 ಎಕರೆ ಜಾಗ ನೀಡಲು ಮೈವಿವಿ ಮೊದಲಿನಿಂದಲೂ ಉತ್ಸುಕವಾಗಿದೆ. ಸದ್ಯ ಸಿಐಐಎಲ್ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಮಾನಸಗಂಗೋತ್ರಿಯಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ಈ ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದರು. ಬಳಿಕ ಯಾವುದೇ ಪ್ರಗತಿ ಕಾಣಲಿಲ್ಲ.
ಅನೇಕ ವರ್ಷಗಳ ಅಲೆದಾಟದ ಬಳಿಕ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಕನ್ನಡ ಕೇಂದ್ರಕ್ಕೆ ಶಾಶ್ವತ ನೆಲೆ ಕಲ್ಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ಘೋಷಿಸಿದ್ದರು. ತದನಂತರವೂ ಯಾವುದೇ ಬೆಳವಣಿಗೆ ಆಗಿಲ್ಲ. ಇದಕ್ಕೆ ಇನ್ನೂ ಕಾಯಂ ವಿಳಾಸಕ್ಕೆ ದೊರೆತಿಲ್ಲ.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತೆ ನೀಡಬೇಕು. ಆಗ ಮಾತ್ರ ಇದು ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗಲಿದೆ. ಈ ಕೇಂದ್ರ ಕೈಗೊಂಡಿರುವ ಕನ್ನಡ ಭಾಷಾ ಕೆಲಸಗಳಿಗೆ ವೇಗಸ್ಪರ್ಶ ದೊರೆಯಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು.ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ, ಹಿರಿಯ ಸಾಹಿತಿ.

ಕನ್ನಡ ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತೆ ಸ್ಥಾನಮಾನ ಮತ್ತು ಶಾಶ್ವತ ನೆಲೆ ಕಲ್ಪಿಸಿಕೊಡುವ ಪ್ರಕ್ರಿಯೆಗಳು ನಡೆದಿವೆ. ಇದರೊಂದಿಗೆ ಕೇಂದ್ರದಿಂದ ಈಗಾಗಲೇ ಕನ್ನಡ ಭಾಷೆ ಕುರಿತು ದಾಖಲೀಕರಣ, ಸಂಶೋಧನೆ, ಪ್ರಸರಣ ಮತ್ತು ಬೋಧನೆ ಕೆಲಸಗಳು ನಡೆಯುತ್ತಿವೆ.ಪ್ರೊ.ಬಿ.ಶಿವರಾಮ ಶೆಟ್ಟಿ, ಯೋಜನಾ ನಿರ್ದೇಶಕ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net