

ವಿಜಯಪುರ: ಮಹಾಮಾರಿ ಕರೊನಾ ತಡೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಜನಸಾಮಾನ್ಯರ ಜೀವ ಉಳಿಸಲು ಮುಂದಾಗಬೇಕೆಂದು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಆಗ್ರಹಿಸಿದ್ದಾರೆ.
ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಹೆಸರಲ್ಲಿ ಮತ್ತೆ ಲಾಕ್‌ಡೌನ್ ಹೇರಿದೆ. ಅಗತ್ಯ ವಸ್ತುಗಳ ಖರೀದಿ ಬಿಟ್ಟರೆ ಉಳಿದೆಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಸದ್ಯಕ್ಕೆ ಈ ನಿಯಮಗಳು ಕರೊನಾ ತಡೆಗೆ ಅನಿವಾರ್ಯವಾದರೂ ಜನರ ಬೇಕು ಬೇಡಗಳನ್ನು ಗಮನದಲ್ಲಿರಿಸಿಕೊಂಡು ನಿಯಮ ಜಾರಿಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕರೊನಾಗಿಂತ ವ್ಯವಸ್ಥೆಯೇ ಕಠೋರವಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗುತ್ತಿಲ್ಲ. ಬೆಡ್‌ಗಳು ಸಿಗುತ್ತಿಲ್ಲ. ರೆಮ್‌ಡಿಸಿವಿರ್ ಔಷಧ ಅಭಾವ ಸೃಷ್ಟಿಯಾಗಿದೆ. ನನ್ನ ಪುತ್ರನಿಗೂ ಅನಾರೋಗ್ಯ ಉಂಟಾಗಿತ್ತು. ವೈದ್ಯರು ರೆಮ್‌ಡಿಸಿವಿರ್ ಔಷಧ ಶಿಫಾರಸ್ಸು ಮಾಡಿದ್ದರು. ಅದಕ್ಕಾಗಿ ತೀವ್ರ ಕಷ್ಟಪಡಬೇಕಾಯಿತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದೆ. ಹಾಗೂ ಹೀಗೂ ಔಷಧ ಸಿಕ್ಕಿತು. ಶಾಸಕನಾಗಿ ನನ್ನದೇ ಪರಿಸ್ಥಿತಿ ಹೀಗಾದರೆ ಜನಸಾಮಾನ್ಯರ ಗತಿ ಏನು? ಎಂದು ದೇವಾನಂದ ಚವಾಣ್ ಕಳವಳ ವ್ಯಕ್ತಪಡಿಸಿದರು.
ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕರೊನಾಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಉಚಿತವಾಗಿ ಲಸಿಕೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಚ್ಚವನ್ನೂ ಅಲ್ಲಿನ ಸರ್ಕಾರಗಳೇ ಭರಿಸುತ್ತಿವೆ. ಆದರೆ, ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ತಮ್ಮದೇ ಆಡಳಿತವಿದ್ದರೂ ಉಚಿತ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಕನಿಷ್ಟಪಕ್ಷ ಮೂಲ ಸೌಕರ್ಯವೂ ಕಲ್ಪಿಸಲಾಗುತ್ತಿಲ್ಲವೆಂದು ಅವರು ‘ವಿಜಯವಾಣಿ’ ಎದುರು ಖೇದ ವ್ಯಕ್ತಪಡಿಸಿದರು.