ಜಿಲ್ಲೆಯ ಅಭಿವೃದ್ಧಿಗೆ 14 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ

IMG_20240311_155839
ಹುಲಿಕೆರೆ ಗ್ರಾಮದ ನೂತನ ಸಮುದಾಯ ಭವನವನ್ನು ಸಂಸದ ಪ್ರಜ್ವಲ್ ರೇವಣ್ಣ ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಉದ್ಘಾಟಿಸಿದರು. ಆಶಾ ಪ್ರಕಾಶ್, ಸಂಪತ್‌ಕುಮಾರ್, ತೋಟಿ ನಾಗರಾಜ್, ದೊರೆಸ್ವಾಮಿ, ಪುಟ್ಟಸ್ವಾಮಿ, ಚಂದ್ರೇಗೌಡ, ತೋಪೇಗೌಡ, ದೇವರಾಜ್ ಇದ್ದರು.
Published on

ನುಗ್ಗೇಹಳ್ಳಿ: ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ಕೇಂದ್ರ ಸರ್ಕಾರದಿಂದ 14 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಸೋಮವಾರ ಸಾರ್ವಜನಿಕ ಸಮುದಾಯ ಭವನ ಮತ್ತು ಶಾಲಾ ಕಟ್ಟಡ ನವೀಕರಣ ಐ ಮಾಸ್ಟ್ ದೀಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲ ಮನೆಗಳಿಗೂ ಹೇಮಾವತಿ ನದಿಯಿಂದ ನೀರು ಶುದ್ಧೀಕರಿಸಿ ಮನೆ ಮನೆಗೆ ನಳನೀರು ಕಲ್ಪಿಸುವ ಯೋಜನೆಗೆ 4,907 ಕೋಟಿ ರೂ. ಬಿಡುಗಡೆಯಾಗಿದೆ. ತಾಲೂಕಿನ ಹಿರೀಸಾವೆಯಿಂದ ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿಗಳ ನಿರ್ಮಾಣಕ್ಕೆ 1,384 ಕೋಟಿ ರೂ. ಬಿಡುಗಡೆ ಮಾಡಿಸಿ ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿರುವುದರಿಂದ ಅಪಘಾತಗಳು ತಪ್ಪಿವೆ ಎಂದರು.

ರಾಜ್ಯದ ತೆಂಗು ಬೆಳೆಯುವ ರೈತರ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ಈ ಸರ್ಕಾರ ವಿಫಲವಾಗಿದೆ ಹಾಸನ ಜಿಲ್ಲೆಯ ಕೊಬ್ಬರಿ ಖರೀದಿಯಲ್ಲಿ ತಾರತಮ್ಯ ಮಾಡಿದ್ದನ್ನು ವಿರೋಧಿಸಿದ್ದರಿಂದ ಮತ್ತೆ 45, ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ 30 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ದೇವೇಗೌಡರಿಂದ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಾರವಾರ-ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಹಿರೀಸಾವೆ ಚನ್ನರಾಯಪಟ್ಟಣದಲ್ಲಿ ನೀಲಗಡೆ ಮಾಡಲು ಪ್ರಯತ್ನ ಮಾಡಲಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಮಾಡಿದ್ದರಿಂದ ಎಲ್ಲ ಸಮುದಾಯ ಹಾಗೂ ಪಕ್ಷದವರಿಗೂ ಸಾಲ ಮನ್ನಾ ಭಾಗ್ಯ ದೊರೆಯಿತು. ರೈತರನ್ನು ಉಳಿಸಲು ಜಾತಿ ಭೇದ ಮಾಡಬಾರದು. ಅನ್ನಭಾಗ್ಯಕ್ಕೆ ಹಣ ಹಾಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ ಬರುತ್ತೆ ಎಂದು ಜನ ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ರೈತರು ಕೊಳವೆಬಾವಿ ಕೊರೆಸಿಕೊಂಡು ಅವರೇ ಹಣ ಕಟ್ಟಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿಸಿಕೊಳ್ಳುವ ದುಸ್ಥಿತಿ ರೈತರಿಗೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಾಸಕ ಬಾಲಕೃಷ್ಣ ಅವರ ಹೋರಾಟದ ಫಲವಾಗಿ ಎಲ್ಲ ಏತನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಶಾಸಕರ ಜೊತೆ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸಲು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಯುವಕರು ಜನ ಸೇವೆಗೆ ಮುಂದೆ ಬರಬೇಕು. ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ ಕಾಮಗಾರಿಗಳು ಎರಡು ವರ್ಷಗಳ ಪೂರ್ಣಗೊಳ್ಳಲಿವೆ. ತೋಟಿ ಏತ ನೀರಾವರಿ ಯೋಜನೆ ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ನೀರು ಹರಿಸಲಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧರಣಿಕುಮಾರ್, ಯುವ ಮುಖಂಡ ಎಚ್ಪಿ ಸಂಪತ್‌ಕುಮಾರ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್, ಬಿ.ರಂಗಸ್ವಾಮಿ, ನಾಗೇಂದ್ರಬಾಬು, ಚಂದ್ರೇಗೌಡ, ತೋಪೇಗೌಡ, ದೇವರಾಜ್, ಲಕ್ಷ್ಮೀದೇವಿ ಜಯರಾಮ್, ರೇಣುಕಾ ರಂಗಸ್ವಾಮಿ, ಇ.ನಾಶಪ್ಪ, ವಾರ್ಡನ್ ಮಹೇಶ್, ರಂಗೇಗೌಡ, ಹಿರಿಯಣ್ಣ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net