

ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನರನ್ನು ಬಂಧಿಸಿ ರೂ.67.79 ಲಕ್ಷ ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿರುವುದಾಗಿ ಎಸ್ಪಿ ಲಕ್ಷ$್ಮಣ ನಿಂಬರಗಿ ತಿಳಿಸಿದರು.ಒಟ್ಟು 12 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ
271 ಗ್ರಾಂ ಚಿನ್ನಾಭರಣ, 30 ಲಕ್ಷ ರೂ. ನಗದು, 4 ಮೋಟಾರ್ ಸೈಕಲ್, ಎ.ಸಿ. ಸೇರಿದಂತೆ 67,79,500 ರೂ. ಮೌಲ್ಯದ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನಿಂದ 4.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಆದರ್ಶನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಮೋಟಾರ್ ಸೈಕಲ್ ಹಾಗೂ ಬಂಗಾರ ಕಳ್ಳತನಕ್ಕೆ ಸಂಬಂಧಿಸಿದಂತೆ ಮುರ್ತುಜಸಾಬ ಊರ್ಫ್ ಬಾಬಾ ಮೊಹ್ಮದ್ಆದಿಲ್ಷಾಹ ಖಾನ್ (21) ಎಂಬಾತನನ್ನು ಬಂಧಿಸಿ ಆತನಿಂದ 45 ಗ್ರಾಂ ಚಿನ್ನಾಭರಣ, 3 ಮೋಟಾರ್ ಸೈಕಲ್ಗಳು ಸೇರಿ 5.10 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಮೋದಿನಸಾಬ ಊರ್ಫ್ ಮೋದ್ಯಾ ಸರ್ದಾರ್ಸಾಬ್ ವಾಲೀಕಾರ ಎಂಬಾತನನ್ನು ಬಂಧಿಸಿ ಆತನಿಂದ 10.32 ಲಕ್ಷ ರೂ. ಮೌಲ್ಯದ 172 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಸಾಗರ ಸಂಪತ್ ತೇವರೆಟ್ಟಿ ಎಂಬ ಯುವಕನನ್ನು ಬಂಧಿಸಲಾಗಿದೆ. ಈತ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನಿಂದ 88 ಸಾವಿರ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಠಾಣೆಯ ವ್ಯಾಪ್ತಿಯಲ್ಲಿನ ಪ್ರಕರಣದಲ್ಲಿ ಮುದಸ್ಸರ್ ಮುದ್ಯಾ ಅಬ್ದುಲ್ಹಮೀದ್ ಊರ್ಫ್ ಅಬ್ದುಲ್ ಹಮೀದ್ ಪಠಾಣ ಎಂದು ಗುರುತಿಸಲಾಗಿದ್ದು, ಆತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆಸೀಫ್ ಉಸ್ಮಾನ್ ಜಮಾದಾರನನ್ನು ಬಂಧಿಸಿ 40 ಸಾವಿರ ರೂ. ಮೌಲ್ಯದ ಹವಾನಿಯಂತ್ರಕಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರುದ್ದೇಶ ಗಂಗಪ್ಪ ಬಡಿಗೇರ ಎಂಬಾತನನ್ನು ಬಂಧಿಸಿ 1.65 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ನಿಂಬರಗಿ ವಿವರಿಸಿದರು.
ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಟ್ಯಾಚ್ ಬ್ರೇಕರ್ ಕಳ್ಳತನ ಮಾಡಿದ ಶಟ್ಟಿ ಉರ್ಫ್ ಸತೀಶ ಗೇಮು ರಾಠೋಡ, ಮಾರುತಿ ಶಂಕರ ರಾಠೋಡ, ಮೌಲಾಲಿ ಹುಸೇನಸಾಬ ಮಮದಾಪೂರ ಅವರನ್ನು ಬಂಧಿಸಿ 4.5 ಲಕ್ಷ ರೂ. ಮೌಲ್ಯದ ಹಿಟಾಚಿ ಬ್ರೇಕರ್ ಜಪ್ತಿ ಮಾಡಿಕೊಳ್ಳಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಗರಗ ಗ್ರಾಮದ ಕೆ.ಮುನೇಶ ಊರ್ಫ್ ರಮೇಶ ಹನುಮಂತಪ್ಪ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ 10 ಲಕ್ಷ ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಜಿಲ್ಲೆಯ ಫಕೀರಪ್ಪ ನೀಲಪ್ಪ ಬೇಲೂರ, ವಿಜಯನಗರದ ಹರಪ್ಪನಹಳ್ಳಿಯ ನಿವಾಸಿ ಪ್ರವಿಣ ಕೃಷ್ಣಪ್ಪ ತಳವಾರ, ಅದೇ ಗ್ರಾಮದ ನಿವಾಸಿ ಹಣಮಂತ ಉಮೇಶ ಇಟಗಿ ಅವರನ್ನು ಬಂಧಿಸಿ 20 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಟಾಟಾ ನೆಕ್ಸಾನ್ ಕಾರು ವಶಕ್ಕೆ ಪಡೆಯಲಾಗಿದೆ ಎಂದರು.
ಎಎಸ್ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತಿತರರಿದ್ದರು.