ವಿನಯ ಜಾಮೀನು ತೀರ್ಪು 14ಕ್ಕೆ

Court logo
Published on

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿನ ತೀರ್ಪನ್ನು ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ ಡಿ. 14ಕ್ಕೆ ಕಾಯ್ದಿರಿಸಿದೆ.

ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡಿಸಿದರು. ವಿನಯ ಕುಲಕರ್ಣಿ ಪ್ರಭಾವಿ ವ್ಯಕ್ತಿಯಾಗಿದ್ದು, ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದಾರೆ. ಜಾಮೀನು ನೀಡಿದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯ ಸಿಬಿಐ ವಾದಕ್ಕೆ ಪ್ರತಿವಾದ ಮಂಡಿಸಲು ವಿನಯ ಪರ ವಕೀಲರಿಗೆ ಅವಕಾಶ ನೀಡಿತು. ನಂತರ ಕೋರ್ಟ್ ಹಾಲ್​ನಲ್ಲಿ ಸುಮಾರು ಅರ್ಧ ಗಂಟೆ ವಾದ ಮಂಡಿಸಿದ ವಿನಯ ಪರ ವಕೀಲ ಬಾಹುಬಲಿ ಧಾನವಾಡೆ, ವಿನಯ ಕುಲಕರ್ಣಿ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಯೋಗೀಶಗೌಡರ ಹತ್ಯೆಗೆ ಬಳಸಿದ ಬಡಿಗೆ ಮತ್ತು ಮಚ್ಚುಗಳಿಗೆ ಮೃತನ ರಕ್ತ ಲೇಪಿಸಲಾಗಿದೆ ಎಂದು ಸಿಬಿಐ ವಕೀಲರು ವಾದಿಸಿದ್ದಾರೆ. ಆದರೆ, ಕೊಲೆಯ ನಂತರ ಸುಮಾರು 12 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ ಮಾಡಿದ ಮೇಲೆ ಬಾಟಲ್​ಗಟ್ಟಲೇ ರಕ್ತ ಸಿಕ್ಕಿದ್ದು ಹೇಗೆ? ಅಲ್ಲದೆ ಅದಕ್ಕೆ ಸಹಕರಿಸಿದ ವೈದ್ಯ ಯಾರು? ಆ ವೈದ್ಯನ ವಿಚಾರಣೆ ಏಕೆ ಮಾಡಿಲ್ಲ? ಎಂದರು.

ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರದ ವಿಚಾರಕ್ಕೆ ಸಂಬಂಧಿಸಿ, ಸಿಬಿಐ ಒಂದು ಪತ್ರವನ್ನು ಮುಂದಿಟ್ಟುಕೊಂಡು ತನಿಖೆ ನಡೆಸುತ್ತಿದೆ. ಇಡೀ ತನಿಖೆ ಪತ್ರದ ಸುತ್ತಲೂ ತಿರುಗುತ್ತಿದೆ. ಆದರೆ ಕೊಲೆಗೂ ಮುಂಚೆ ಅಂದರೆ 2016ರ ಜೂ. 6ರಂದು ಪತ್ರ ಬಂದಿದ್ದರೂ ಏಕೆ ಯಾರೂ ದೂರು ನೀಡಲಿಲ್ಲ? ಅಲ್ಲದೆ ಇದೇ ಪತ್ರ ಕೊಲೆ ನಡೆದ ಮರುದಿನ ಬೆಳಕಿಗೆ ಬರುತ್ತದೆ ಅಂದರೆ ಏನರ್ಥ? ಇಲ್ಲಿಯವರೆಗೂ ಪತ್ರ ಬರೆದವರು ಯಾರು ಎನ್ನುವುದು ಗೊತ್ತಿಲ್ಲ. ಒಂದು ಅನಾಮಧೇಯ ಪತ್ರ ಇಡೀ ಪ್ರಕರಣಕ್ಕೆ ಹೇಗೆ ಆಧಾರವಾಗುತ್ತದೆ? ಎಂದರು.

ಇನ್ನು ಕೊಲೆ ನಡೆಯುವುದಕ್ಕೂ ಮೊದಲು ಆರೋಪಿ ಬಸವರಾಜ ಮುತ್ತಗಿ, ವಿನಯ ಕುಲಕರ್ಣಿ ಅವರನ್ನು ಭೇಟಿಯಾಗಿರುವ ಬಗ್ಗೆ ಸಿಬಿಐ ಪ್ರಸ್ತಾಪಿಸಿದೆ. ಭೇಟಿಯ ಉದ್ದೇಶ ಕೊಲೆಗೆ ಸಂಚು ಎನ್ನಲಾಗುತ್ತಿದೆ. ವಿನಯ ಕುಲಕರ್ಣಿ ಆಗ ಸಚಿವರಾಗಿದ್ದವರು. ಸಾರ್ವಜನಿಕರ ಭೇಟಿ ಸಾಮಾನ್ಯ. ಹಾಗಾಗಿ ಅನೇಕರು ಭೇಟಿಯಾಗಿರುತ್ತಾರೆ. ಅವರು ಮಾಡಿರುವ ಸಂಚಿಗೆ ವಿನಯ ಕುಲಕರ್ಣಿ ಹೇಗೆ ಕಾರಣರಾಗುತ್ತಾರೆ? ಅಲ್ಲದೆ ಹಿಂದಿನ ಸಿಎಂ ಒಬ್ಬರು ಕಚೇರಿಯ ಕೆಲಸಗಳನ್ನು ಹೋಟೆಲ್​ವೊಂದರಲ್ಲಿಯೇ ಕುಳಿತು ಮಾಡುತ್ತಿದ್ದರು. ಹಾಗಾದರೆ ಅಲ್ಲಿಗೆ ಹೋದವರು ಸಂಚು ರೂಪಿಸಿದರೆ ಅದಕ್ಕೆ ಮುಖ್ಯಮಂತ್ರಿಯನ್ನು ಹೊಣೆ ಮಾಡಲು ಸಾಧ್ಯವೇ? ಎಂದು ವಾದ ಮಂಡಿಸಿದರು.

ಹತ್ಯೆ ನಡೆದ ಉದಯ ಜಿಮ್ ಪಕ್ಕದಲ್ಲಿದ್ದ ಅಂಚೆ ಇಲಾಖೆ ಕಚೇರಿಯ ಸಿಸಿ ಟಿವಿಯಲ್ಲಿ ಸೆರೆಯಾದ ವೀಡಿಯೋ ಪೈಕಿ ಮೊದಲಿಗೆ ಎಲ್ಲ ವಿಡಿಯೋ ಇಲ್ಲ ಎಂದ ಪೊಲೀಸರು ಬಳಿಕ ಸಿಬಿಐ ವಿಚಾರಣೆಯಲ್ಲಿ ಸಂಪೂರ್ಣ ವಿಡಿಯೋ ಇದೆ ಎಂದಿದ್ದು ಏಕೆ? ಎಂದು ನ್ಯಾಯಾಲಯದ ಗಮನ ಸೆಳೆದರು. ವಿನಯಗೆ ಕೃಷಿ ಹಿನ್ನೆಲೆ ಇದೆ. ಅವರು ಹಾಲಿನ ಡೇರಿ ಹೊಂದಿದ್ದಾರೆ. ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಅವರಿಗೆ ಯಾವುದೇ ಕಠಿಣ ಷರತ್ತು ಹಾಕಿದರೂ ಪಾಲಿಸುತ್ತಾರೆ. ಹೀಗಾಗಿ ಅವರಿಗೆ ಜಾಮೀನು ನೀಡಿ ಎಂದು ಮನವಿ ಮಾಡಿದರು.

ಎರಡೂ ಕಡೆಯ ವಕೀಲರ ವಾದ- ಪ್ರತಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿಯ ತೀರ್ಪನ್ನು ಡಿ. 14ಕ್ಕೆ ಕಾಯ್ದಿರಿಸಿತು.

ವಿನಯ ಕುಲಕರ್ಣಿ ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ. ಜಾಮೀನು ಸಿಗುತ್ತಾ ಅಥವಾ ಜೈಲು ಮುಂದುವರಿಯುತ್ತಾ ಎನ್ನುವುದು ಡಿ. 14ಕ್ಕೆ ಪ್ರಕಟಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net