ಇಂದಿನಿಂದ 14 ದಿನ ಲಾಕ್​ಡೌನ್

9 vikram 2
Published on

ಧಾರವಾಡ: ಕರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಧಿಸಿದ್ದ ಜನತಾ ಕರ್ಫ್ಯೂ ಭಾನುವಾರ ರಾತ್ರಿ ಪೂರ್ಣಗೊಂಡು ಸೋಮವಾರದಿಂದ ಲಾಕ್​ಡೌನ್ ಆರಂಭವಾಗಲಿದೆ. ಒಂದು ರೀತಿ ಜನತಾ ಕರ್ಫ್ಯೂ ಭಾಗ-2ರಂತೆ ಭಾಸವಾಗಿರುವ ಲಾಕ್​ಡೌನ್ ನಗರದಲ್ಲಿ ಯಾವ ರೀತಿ ಅನುಷ್ಠಾನಗೊಳ್ಳಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈಗಾಗಲೇ 14 ದಿನಗಳ ಕಾಲ ವಿಧಿಸಿದ್ದ ಜನತಾ ಕರ್ಫ್ಯೂ ಸೋಮವಾರ ರಾತ್ರಿ ಅಂತ್ಯವಾಗಬೇಕಿತ್ತು. ಅಷ್ಟರೊಳಗೆ ಸರ್ಕಾರ ಮೇ 10ರಿಂದ ಲಾಕ್​ಡೌನ್ ಘೊಷಿಸಿದ್ದು, ಇನ್ನೂ ಒಂದು ದಿನ ಮುನ್ನವೇ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡು ಜನರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಸರ್ಕಾರ ಘೊಷಿಸಿದ ಲಾಕ್​ಡೌನ್ ನಿಯಮಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು ಬಿಟ್ಟರೆ ಬಹುತೇಕ ನಿಯಮಗಳು ಜನತಾ ಕರ್ಫ್ಯೂ ನಿಯಮಗಳಾಗಿದೆ. ಹೀಗಾಗಿ ಜನರು ಎಷ್ಟರ ಮಟ್ಟಿಗೆ ಲಾಕ್​ಡೌನ್ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದುನ್ನು ಕಾದು ನೋಡಬೇಕಿದೆ.

ಭಾನುವಾರ ಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರು, ಅನಗತ್ಯವಾಗಿ ಓಡಾಡುವ ಜನರಿಗೆ ಬಿಸಿ ಮುಟ್ಟಿಸಿದರು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಜಿಲ್ಲೆ ಪ್ರವೇಶಿಸುವ ಗಡಿ ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ನಡೆಸಿದರು. ಮದುವೆ ಆಮಂತ್ರಣ, ತುರ್ತು ವೈದ್ಯಕೀಯ ಸೇವೆ ಎಂದು ಸುಳ್ಳು ಹೇಳಿ ಯಾಮಾರಿಸಲು ಪ್ರಯತ್ನಿಸಿದವರಿಗೆ ತಕ್ಕಶಾಸ್ತಿ ಮಾಡಿ ವಾಹನಗಳನ್ನು ಸೀಜ್ ಮಾಡಿದರು.

ಬೆಳಗ್ಗೆ ಸುಭಾಷ್ ಮಾರುಕಟ್ಟೆ ಹೌಸ್​ಫುಲ್ ಆಗಿತ್ತು. ಸರ್ಕಾರದ ನಿಯಮ ಪಾಲಿಸದೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಸಮಯ ದುರುಪಯೋಗ ಪಡಿಸಿಕೊಳ್ಳುವ ದೃಶ್ಯಗಳು ಕಂಡುಬಂದವು. ತರಕಾರಿ, ಕಿರಾಣಿ ಖರೀದಿಗೆ ಜನರು ಮುಗಿ ಬಿದ್ದಿದ್ದರು.

ಗ್ರಾಮೀಣ ಭಾಗದಲ್ಲಿ 70ಕ್ಕೂ ಹೆಚ್ಚು ಬೈಕ್ ಜಪ್ತಿ

ಧಾರವಾಡ ಗ್ರಾಮೀಣ ಭಾಗದಲ್ಲಿ ಎಸ್ಪಿ ಪಿ. ಕೃಷ್ಣಕಾಂತ ಹಾಗೂ ಡಿವೈಎಸ್ಪಿ ಎಂ.ಬಿ. ಸುಂಕದ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆಯಿಂದ ತಪಾಸಣೆ ನಡೆಸಿದ ಪೊಲೀಸ್ ಅಧಿಕಾರಿಗಳು 70ಕ್ಕೂ ಹೆಚ್ಚು ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿಗಳು ನಿಗದಿ, ನರೇಂದ್ರ, ಹಾರೋಬೆಳವಡಿ, ಹೆಬ್ಬಳ್ಳಿ ಮತ್ತು ಅಮ್ಮಿನಭಾವಿ ಗ್ರಾಮಗಳಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರ ಮೇಲೆ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಎಸ್ಪಿ, ಸೋಮವಾರದಿಂದ ತಪಾಸಣೆ ಇನ್ನಷ್ಟು ಕಠಿಣಗೊಳಿಸಲಾಗುವುದು. ಕರ್ಫ್ಯೂ ಉಲ್ಲಂಘನೆ ಮೇರೆಗೆ ವಶ ಪಡಿಸಿಕೊಂಡ ಹಾಗೂ ವಶಪಡಿಸಿಕೊಳ್ಳುವ ವಾಹನಗಳನ್ನು ಲಾಕಡೌನ್ ಮುಗಿಯುವವರೆಗೆ ಮರಳಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಜಾರಿಗೊಳಿಸಿರುವ ಕರ್ಫ್ಯೂ ಹಾಗೂ ಲಾಕ್​ಡೌನ್ ನಿಯಮಗಳನ್ನು ತಪ್ಪದೆ ಪಾಲಿಸಿ ಸಹಕಾರ ನೀಡಬೇಕು. ಅನಗತ್ಯವಾಗಿ ಸಂಚರಿಸುವ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net