ಇನೋವಾ ಕಾರು ಖರೀದಿಗೆಂದು ಇಟ್ಟಿದ್ದ 14.75 ಲಕ್ಷ ರೂ. ಕಳ್ಳರ ಪಾಲಾಯ್ತು...

SHOP
Published on

ಈಶ್ವರಮಂಗಲ: ಇನೋವಾ ಕಾರು ಖರೀದಿಲೆಂದು ಪುತ್ತೂರಿನ ಪಾದರಕ್ಷೆಗಳ ಮಾರಾಟ ಮಳಿಗೆ ಮಾಲೀಕರೊಬ್ಬರು ತಮ್ಮ ಅಂಗಡಿಯಲ್ಲಿ ಇಟ್ಟಿದ್ದ 14,74,500 ಲಕ್ಷ ರೂ.ವನ್ನು ಗುರುವಾರ ರಾತ್ರಿ ಕಳ್ಳರು ದೋಚಿದ್ದಾರೆ.

ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಪ್ರಕಾಶ್ ಫೂಟ್‌ವೇರ್ ಅಂಗಡಿಯಲ್ಲಿ ಕಳವು ನಡೆದಿದೆ. ಅಂಗಡಿ ಮಾಲೀಕ ದರ್ಬೆ ಪ್ರಕಾಶ್ ಮಂಜಿಲ್ ನಿವಾಸಿ ಮೊಹಮ್ಮದ್ ಶಮೀರ್ ಬೆಂಗಳೂರಿನಿಂದ ಹಳೇ ಕಾರುಗಳನ್ನು ಖರೀದಿಸಿ ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದರು. ಕಾರು ವ್ಯವಹಾರಕ್ಕೆ ಸಂಬಂಧಿಸಿದ 8 ಲಕ್ಷ ರೂ. ಹಾಗೂ ಸ್ನೇಹಿತ ಸಿದ್ದೀಕ್ ಎಂಬುವರು ನೀಡಿದ್ದ 7 ಲಕ್ಷ ರೂ.ಗಳಲ್ಲಿ 14.50 ಲಕ್ಷ ರೂ.ವನ್ನು ಅಂಗಡಿಯ ಲಾಕರ್‌ನಲ್ಲಿಟ್ಟಿದ್ದರು. ಅಂಗಡಿ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿದ್ದ ಕಳ್ಳರು ಅಂಗಡಿಯೊಳಗಿದ್ದ ಲಾಕರ್ ಒಡೆದು, ಅದರೊಳಗಿಟ್ಟಿದ್ದ 14.50 ಲಕ್ಷ ರೂ. ಮಾತ್ರವಲ್ಲದೆ, ಕ್ಯಾಶ್ ಡ್ರಾವರ್‌ನಲ್ಲಿಟ್ಟಿದ್ದ 24,500 ರೂ. ದೋಚಿದ್ದಾರೆ.

ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕಳ್ಳರು ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ. ದೊಡ್ಡ ಮೊತ್ತದ ನೋಟುಗಳನ್ನು ದೋಚಿರುವ ಕಳ್ಳರು 10, 5 ರೂ. ನೋಟು ಹಾಗೂ ನಾಣ್ಯಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ಪುತ್ತೂರು ನಗರ ಪೊಲೀಸರು ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಹೀರಯ್ಯ ಹಿರೇಮಠ್ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net