

ಹನೂರು: ತಾಲೂಕಿನ ಹುಲುಸುಗುಡ್ಡೆ ಸಮೀಪದ ಹುಲ್ಲೇಪುರದಲ್ಲಿ ಅತಿಕ್ರಮಿಸಿದ್ದ ಸುಮಾರು 14.5 ಎಕರೆ ಸರ್ಕಾರಿ ಜಾಗವನ್ನು ಮಂಗಳವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವುಗೊಳಿಸಿದರು.
ಮಂಗಲ ಗ್ರಾಮದ ವಿಶ್ವೇಶ್ವರ್‌ರಾವ್ ಪ್ರಸಾದ್ ಎಂಬುವರು ಹುಲ್ಲೇಪುರ ಗ್ರಾಮದ ಸರ್ವೇ ನಂಬರ್ 355/1ಎ ರಲ್ಲಿ 5.50 ಎಕರೆ, 356/ಎ ರಲ್ಲಿ 5.94 ಹಾಗೂ 356/ಸಿರಲ್ಲಿ 2.58 ಎಕರೆ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಮೇಕೆ ಸಾಕಣೆ ಶೆಡ್ ಹಾಗೂ ವಾಸದ ಮನೆ ನಿರ್ಮಿಸಿಕೊಂಡಿದ್ದರು. ಹಾಗೆಯೇ ಇವರ ಸಹೋದರ ಸಾಂಬಾಜೀರಾವ್ ಸಹ ಸರ್ವೇ ನಂಬರ್ 312 ರಲ್ಲಿ 0.49 ಸೆಂಟ್ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗಿತ್ತು.
ಜಿಲ್ಲಾಧಿಕಾರಿ ಅವರು ಕೂಡಲೇ ಅಗತ್ಯ ಕ್ರಮ ವಹಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಈ ಸಂಬಂಧ ಏ.4ರಂದು 15 ದಿನಗಳೊಳಗೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವುದೇ ಕ್ರಮವಾಗಿರಲಿಲ್ಲ.
ಈ ಹಿನ್ನೆಲೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರು ಬೆಳಗಿನ ಜಾವ 5ರಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರದ ಮೂಲಕ ಒತ್ತುವರಿ ತೆರವುಗೊಳಿಸಲಾಯಿತು. ಕಾರ್ಯಾಚರಣೆಯು ಮಧ್ಯಾಹ್ನ 1.30ರವರೆಗೂ ನಡೆಯಿತು. ಈ ಸಂದರ್ಭದಲ್ಲಿ ಆರ್‌ಐ ಶೇಷಣ್ಣ, ಇನ್‌ಸ್ಪೆಕ್ಟರ್ ಸಿ.ಆನಂದಮೂರ್ತಿ, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದರು.
ಸರ್ವೇಗೆ ಒತ್ತಾಯ: ಹುಲ್ಲೇಪುರ ಭಾಗದ ಹಲವು ಕಡೆಗಳಲ್ಲಿ ಸರ್ಕಾರಿ ಜಾಗವಿದೆ. ಆದರೆ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಈಗ 14 ಎಕರೆ ಜಾಗವನ್ನು ತೆರವುಗೊಳಿಸುತ್ತಿರುವುದೇ ಸಾಕ್ಷಿ. ಸರ್ಕಾರಿ ಜಮೀನು ಕಬಳಿಕೆಯಾಗುತ್ತಿದೆ. ಆದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸರ್ವೇ ಕಾರ್ಯ ನಡೆಸಬೇಕು. ಒತ್ತುವರಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂತು.
ಈ ಸಂಬಂಧ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಸರ್ಕಾರಿ ಜಾಗಗಳನ್ನು ಗುರ್ತಿಸಿ ಸರ್ವೇ ಕಾರ್ಯ ಆರಂಭಿಸಿ ಗಡಿ ಗುರ್ತಿಸಲಾಗುವುದು ಎಂದು ತಿಳಿಸಿದರು.