ಪೊಲೀಸರ ಹೆಸರಲ್ಲಿ 14.18 ಲಕ್ಷ ರೂ. ಧೋಖಾ

Cyber Crime
Published on

ರಾಮನಗರ

ವಂಚಕರು ದಿನಕ್ಕೊಂದು ಹೊಸ ದಾರಿ ಹುಡುಕುತ್ತಿದ್ದು, ಅಂತಾರಾಷ್ಟ್ರೀಯ ಕೊರಿಯರ್​ನಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳ ಸಾಗಣೆ ಮಾಡಲಾಗಿದೆ ಎಂದು ಹೆದರಿಸಿ ಹಣ ಕಸಿಯುವ ಹೊಸ ತಂತ್ರ ಅನುಸರಿಸುತ್ತಿದ್ದಾರೆ.

ಇಂತಹುದೇ ಪ್ರಕರಣದಲ್ಲಿ ಇತ್ತೀಚಿಗೆ ಕುಂಬಳಗೂಡು ಬಳಿಯ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿರುವ ಪ್ರಕರಣ ಚರ್ಚೆಯಲ್ಲಿರುವಾಗಲೇ ಬೆಂಗಳೂರು ಹೊರವಲಯದ ಆರ್ಟ್​ ಆ್​ ಲಿವಿಂಗ್​ನಲ್ಲಿ ನೆಲೆಸಿರುವ ಡಾ.ಗೆಂದೆ ಲಾಲ್​ ಬನ್ಸಾಲ್​ ಎನ್ನುವವರು ಬರೋಬ್ಬರಿ 14.18 ಲಕ್ಷ ರೂ.ಗಳನ್ನು ಆನ್​ಲೈನ್​ ವಂಚನೆಯಲ್ಲಿ ಕಳೆದುಕೊಂಡಿದ್ದಾರೆ.

ಸೆ.13ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​ ಡಿಪಾರ್ಟ್​ಮೆಂಟ್​ನಿಂದ ಸುಮಿತ ಬೆತ್ರಾ ಎನ್ನುವ ಹೆಸರಿನ ವ್ಯಕ್ತಿ ಕರೆ ಮಾಡಿ, ನಿಮ್ಮ ಹೆಸರಲ್ಲಿ ಕೌಲಾಲಂಪುರಕ್ಕೆ ಕೊರಿಯರ್​ ಬುಕ್​ ಆಗಿದ್ದು, ಇದರಲ್ಲಿ 16 ನಕಲಿ ಪಾಸ್​ಪೋರ್ಟ್​, 58 ಎಟಿಎಂ ಕಾರ್ಡ್​ಗಳು, 140 ಗ್ರಾಂ ಎಂಡಿಎಂ ಮಾದಕ ವಸ್ತು ಇದೆ ಎಂದು ಹೇಳಿದ್ದಾರೆ. ಈ ವೇಳೆ ಡಾ.ಬನ್ಸಾಲ್​, ನಾನು ಯಾವುದೇ ಕೊರಿಯರ್​ ಬುಕ್​ ಮಾಡಿಲ್ಲ ಎಂದಿದ್ದಾರೆ. ಇಷ್ಟಕ್ಕೆ ಬಿಡದ ವಂಚಕರು ಹಾಗಿದ್ದರೆ ಈ ಬಗ್ಗೆ ದೆಹಲಿ ವಸಂತ ಗಂಜ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡುವಂತೆ ಸೂಚನೆ ನೀಡಿ, ಠಾಣೆ ಎಸ್​ಎಚ್​ಒ ಎಂದು ಹೇಳಿ ಸುನಿಲ್​ ಕುಮಾರ್​ ಎನ್ನುವರಿಗೆ ಕಾಲ್​ ಕನೆಕ್ಟ್​ ಮಾಡಿದ್ದಾರೆ.

ಅತ್ತ ಸುನಿಲ್​ ಕುಮಾರ್​ ಎಂಬಾತ ಮಾತನಾಡಿ, ನಿಮ್ಮ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಇದು ಸಿಬಿಐ ತನಿಖೆಯಲ್ಲಿದೆ ಎಂದು ಹೇಳಿ, ಸಿಬಿಐ ಅಧಿಕಾರಿ ಅನಿಲ್​ ಯಾದವ್​ ಎನ್ನುವರಿಗೆ ಕಾಲ್​ ಕನೆಕ್ಟ್​ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಾದ ಕೆಲವೇ ಹೊತ್ತಿಗೆ ಅನಿಲ್​ ಯಾದವ್​ ಎನ್ನುವವರು ಕರೆ ಮಾಡಿ, ಇದು ಸುಮಾರು 600 ಕೋಟಿ ರೂ. ವಂಚನೆ, ಇದರಲ್ಲಿ 118 ಜನರು ಭಾಗಿಯಾಗಿದ್ದು, ಇದರಲ್ಲಿ ನೀವೂ ಒಬ್ಬರು ಎಂದು ವಾಟ್ಸ್​ಆ್ಯಪ್​ಗೆ ವಾರಂಟ್​ ಪ್ರತಿಯೊಂದನ್ನು ಕಳುಹಿಸಿದ್ದಾರೆ. ಅಲ್ಲದೆ, ಇವರ ಆಧಾರ್​ ಕಾರ್ಡ್​, ೋಟೋ, ಬ್ಯಾಂಕ್​ ಮಾಹಿತಿ ಸೇರಿ ಇತರ ಮಾಹಿತಿ ಪಡೆದುಕೊಂಡಿದ್ದಾರೆ.

ಮತ್ತೆ ಕರೆ ಮಾಡಿ ನಿಮ್ಮನ್ನು ಈ ಪ್ರಕರಣದಿಂದ ತೆಗೆದು ಹಾಕಲು ನನ್ನ ಅಕೌಂಟ್​ಗೆ ಹಣ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ. ಈ ವೇಳೆಗಾಗಲೇ ಗಾಬರಿಗೊಂಡಿದ್ದ ಡಾ.ಬನ್ಸಾಲ್​ ಸೆ.13ರಿಂದ 19ರ ನಡುವೆ ವಿವಿಧ ಬ್ಯಾಂಕ್​ ಖಾತೆಗಳಲ್ಲಿ ಇದ್ದ ಹಣವನ್ನು 14.18 ಲಕ್ಷ ರೂ. ಗಳನ್ನು ವಂಚಕರ ಖಾತೆಗೆ ಜಮೆ ಮಾಡಿದ್ದಾರೆ. ಇಷ್ಟಾದರೂ ತೃಪ್ತಿಪಡದ ವಂಚಕರು ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡು ಕಗ್ಗಲಿಪುರ ಠಾಣೆಗೆ ಡಾ.ಬನ್ಸಾಲ್​ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net