ಕರಾವಳಿ,ಮಲೆನಾಡಲ್ಲಿ 14-15 ಸೆಂಮೀ ಮಳೆ: ಮುಂದಿನ 2 ದಿನ ಇನ್ನಷ್ಟು ಬಿರುಸು

Rain Alert
Published on

ಬೆಂಗಳೂರು: ಹಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ, ಮುಂದಿನ 3 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನ ವಿರಾಜಪೇಟೆ 17, ಶಿವಮೊಗ್ಗದ ಆಗುಂಬೆ 14, ದಕ್ಷಿಣ ಕನ್ನಡದ ಧರ್ಮಸ್ಥಳ 14, ಚಿಕ್ಕಮಗಳೂರಿನ ಕಳಸ 12, ಕರ್ಮಡಿ 11, ಕೊಟ್ಟಿಗೆಹಾರ 11, ಶೃಂಗೇರಿ 10, ಉತ್ತರ ಕನ್ನಡದ ಬನವಾಸಿ, ಕದ್ರಾ, ಯಲ್ಲಾಪುರ, ಉಡುಪಿಯ ಸಿದ್ದಾಪುರ ಮತ್ತು ಬೆಳಗಾವಿಯ ಖನಾಪುರದಲ್ಲಿ 7-8 ಸೆಂಮೀ ಮಳೆ ಬಿದ್ದಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 2 ದಿನ ಹಾಗೂ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಜೂ.27ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಕೆಲ ಭಾಗಗಳಲ್ಲಿ ಗಂಟೆಗೆ 65 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಕೊಡಗಿನಲ್ಲಿ ಜೂ.27ರಂದು ತೀವ್ರವಾಗಿ ಮಳೆಯಾಗುವ ಸಂಭವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು, ಈ ಅವಧಿಯಲ್ಲಿ 204 ಮಿಮೀವರೆಗೆ ಮಳೆಯಾಗಲಿದೆ.

ಬೆಳಗಾವಿ, ಬೀದರ್, ಕಲಬುರಗಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಸೇರಿ ಉಳಿದ ಜಿಲ್ಲೆಗಳಲ್ಲಿ ಮುಂದಿನ 3 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಸುರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net