13ರಿಂದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವ

11 HANUR 1
Published on

ಹನೂರು: ಪಟ್ಟಣದ ಅದಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಮಾ.13ರಿಂದ 4 ದಿನಗಳ ಕಾಲ ನಡೆಯಲಿದ್ದು, ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಾತ್ರೆಯ ಮೊದಲ ದಿನ ಮಾ.13ರಂದು ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಜಾಗರ ಸಮರ್ಪಣೆಗೆ ಭಕ್ತರು ವಾರದ ಮುಂಚೆಯಿಂದಲೇ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸಿ ಬೆಳೆಸಿದ್ದ ಧಾನ್ಯಗಳ ಪೈರುಗಳನ್ನು (ಜಾಗರ) ದೇಗುಲಕ್ಕೆ ಭಕ್ತಿ ಭಾವದಿಂದ ಸಮರ್ಪಿಸುತ್ತಾರೆ. ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಧ್ಯರಾತ್ರಿ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಜಾಗರವನ್ನು ದೇವಿಗೆ ಸಮರ್ಪಿಸುತ್ತಾರೆ.

14ರಂದು ತಂಪುಜ್ಯೋತಿ ಕಾರ್ಯಕ್ರಮ ನಡೆಯಲಿದ್ದು, ಪಟ್ಟಣದ ವಿವಿಧ ಬಡಾವಣೆಯಿಂದ ಭಕ್ತರು ತಂಪುಜ್ಯೋತಿಯನ್ನು (ತಂಬಿಟ್ಟು) ದೇವಿಗೆ ಅರ್ಪಿಸಲಿದ್ದಾರೆ.
ಮಾ.15ರಂದು ಬಾಯಿಬೀಗ ಸೇವೆ ಇರಲಿದ್ದು, ಈಗಾಗಲೇ ಪಟ್ಟಣದಲ್ಲಿ 80ಕ್ಕೂ ಹೆಚ್ಚು ಭಕ್ತರು ಬಾಯಿಬೀಗ ಹಾಕಿಸಿಕೊಳ್ಳುವುದಕ್ಕೆ ಹರಕೆ ಹೊತ್ತಿದ್ದಾರೆ. ಮಾಲೆ ಧರಿಸಿ ಪ್ರತಿನಿತ್ಯ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಹರಕೆ ಹೊತ್ತ ಭಕ್ತರು ಸುಮಾರು 20 ಅಡಿ ಸರಳಿನಿಂದ ಬಾಯಿಬೀಗವನ್ನು ಹಾಕಿಕೊಳ್ಳುವ ಮೂಲಕ ದೇವಿಗೆ ಹರಕೆ ತೀರಿಸುತ್ತಾರೆ.

ಮಾ.16ರಂದು ಜಾತ್ರೆಯ ಕೊನೆಯ ದಿನ ಅಗ್ನಿಕುಂಡ ದರ್ಶನ ಕಾರ್ಯಕ್ರಮವಿದೆ. ಅಂದು ಪ್ರಾತಃಕಾಲದಲ್ಲಿ ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಅಗ್ನಿಕುಂಡ ಎತ್ತಲಾಗುತ್ತದೆ. ಈ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

230 ವರ್ಷಗಳ ಇತಿಹಾಸನ: ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ 230 ವರ್ಷಗಳ ಇತಿಹಾಸವಿದ್ದು, ಪಟ್ಟಣದ ಜನತೆ ಅದಿದೇವತೆಯಾಗಿ ಪೂಜಿಸುತ್ತಿದ್ದಾರೆ. ಹಿಂದಿನಿಂದಲೂ ಕೋಮು ಸೌಹಾರ್ದತೆಯ ಹಾಗೂ ಸಾಮರಸ್ಯದ ಸಂಕೇತವಾಗಿ ಈ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ. ದೇಗುಲದಲ್ಲಿ ನಿತ್ಯವೂ ಪೂಜೆ ನೆರವೇರಿಸಲಾಗುತ್ತಿದೆ. ಅಮಾವಾಸ್ಯೆ, ಹುಣ್ಣಿಮೆ ಹಬ್ಬ ಹರಿದಿನ ಹಾಗೂ ಇನ್ನಿತರ ದಿನಗಳಂದು ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರತಿ ಮಂಗಳವಾರ ದೇಗುಲದ ವತಿಯಿಂದ ಅನ್ನಸಂತರ್ಪಣೆ ನಡೆಯುತ್ತದೆ.

ಜಾತ್ರೆಯ ವಿಶೇಷತೆ: ಈಗಾಗಲೇ 15 ದಿನ ಮುಂಚಿತವಾಗಿಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಅರ್ಚಕರಿಗೆ ವಿಧಿ ವಿಧಾನದ ಅನ್ವಯ ಕಂಕಣ ಕಟ್ಟಿದ್ದು, ದೇಗುಲದ ಮುಂಭಾಗ ಅಗ್ನಿಕುಂಡ ಕಂಬವನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮೇಲೆ ಮಣ್ಣಿನ ಮಡಕೆಯ ಕರಗವನ್ನು ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಕಂಬವೇ ಬೆಟ್ಟಳ್ಳಿ ಮಾರಮ್ಮನ ಪತಿ ದೇವರು ಎಂಬ ಪ್ರತೀತಿ ಇದೆ. ಈ ಕಂಬ ಹಾಕಿದ ದಿನದಿಂದ ಪ್ರತಿ ದಿನ ರಾತ್ರಿ ರಂಗಕುಣಿತ ಪ್ರಾರಂಭವಾಗಿದ್ದು, ಪಟ್ಟಣದಲ್ಲಿ ಮಾಂಸ ಮಾರಾಟ ಸ್ಥಗಿತಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ ನಿಲ್ಲಿಸಲಾಗಿದೆ. ಪಟ್ಟಣದಲ್ಲಿ ಮಾಂಸದ ಅಂಗಡಿಗಳು, ಮಾಂಸಾಹಾರಿ ಹೋಟೆಲ್‌ಗಳು ಬಂದ್ ಆಗಿವೆ.
ಸಾಮರಸ್ಯದ ಸಂಕೇತ: ಇಲ್ಲಿನ ಮತ್ತೊಂದು ವಿಶೇಷತೆಯೆನೆಂದರೆ ಈ ಜಾತ್ರಾ ಮಹೋತ್ಸವ ಸಾಮರಸ್ಯತೆಯ ಸಂಕೇತವಾಗಿದೆ. ಪಟ್ಟಣದಲ್ಲಿ ವಾಸವಿರುವ ಮುಸ್ಲಿಮರು ಸಹ ಮಾಂಸಾಹಾರ ತ್ಯಜಿಸಿದ್ದು, ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net