

ಹಾಸನ: ಹಾಸನ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ರಂಗ ಹೃದಯ ಮತ್ತು ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ಏಪ್ರಿಲ್ 13 ರಿಂದ ಮೇ 5ರ ವರೆಗೂ ಕುಣಿಯೋಣು ಬಾರಾ ಎಂಬ ಶೀರ್ಷಿಕೆಯ ರಂಗ ತರಬೇತಿ ಶಿಬಿರ (ಬೇಸಿಗೆ ಶಿಬಿರವನ್ನು) ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಶಾಸ್ತಾ ಪಬ್ಲಿಕ್ ಶಾಲೆಯ ಆವರಣ ಹಾಗೂ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ರಂಗಾಯಣ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಚಿನ್ನೇನಹಳ್ಳಿ ಸ್ವಾಮಿ ತಿಳಿಸಿದರು.
ಈ ಶಿಬಿರದಲ್ಲಿ ಅಭಿನಯ ತರಬೇತಿ, ನಾಟಕ ಕಲಿಕೆ ಮತ್ತು ಪ್ರದರ್ಶನ, ವ್ಯಕ್ತಿತ್ವ ವಿಕಸನ ತರಗತಿಗಳು ನಡೆಯಲಿವೆ. ಜತೆಗೆ ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ ಮತ್ತು ಪೊಲೀಸ್ ಶ್ವಾನದಳದಿಂದ ಪ್ರಾತ್ಯಕ್ಷಿಕೆ, ಹೋಳಿ, ಬೆಳದಿಂಗಳು ಊಟ, ಸಂತೆ, ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಭಾರತ ದರ್ಶನ, ಆಕಾಶ ವೀಕ್ಷಣೆ ಇನ್ನೂ ಹಲವಾರು ವಿಶೇಷ ತರಗತಿಗಳು ಆಯೋಜಿಸಲಾಗಿದೆ. ಶಿಬಿರದ ಭಾಗವಾಗಿ ಒಂದು ದಿನ ಸ್ಥಳೀಯ ಪ್ರವಾಸವನ್ನು ಸಹ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
20 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ನೀನಾಸಂ ಮತ್ತು ರಂಗಾಯಣದಿಂದ ತರಬೇತಿಗೊಂಡ ನುರಿತ ರಂಗಕರ್ಮಿಗಳಿಂದ ತರಬೇತಿ ನೀಡಲಾಗುವುದು. ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿನಯ ತರಬೇತಿ ಕೊಡಲಾಗುವುದು. ಕಲಿಕೆಗೆ ಪೂರಕವಾಗಿ ನಾಟಕ ಪ್ರದರ್ಶನ, ರಂಗಗೀತೆ ಹಾಗೂ ಮಕ್ಕಳೊಂದಿಗೆ ಸಂವಾದ ಮತ್ತು ವಿಶೇಷ ತರಗತಿಗಳು ಹಾಗೂ ಸಮಾರೋಪದಲ್ಲಿ ಶಿಬಿರಾರ್ಥಿಗಳಿಂದ 3 ನಾಟಕ ಪ್ರದರ್ಶನ ಇರುತ್ತದೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು 9986078790, 8217271392, 7676443338 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಬಿರದ ನಿರ್ದೇಶಕರಾದ ಪೂಜಾ ರಘುನಂದನ್, ಪ್ರದೀಪ್ ಇತರರು ಉಪಸ್ಥಿತರಿದ್ದರು.