ಮೈಸೂರು: ಕೈಗಾರಿಕೆ ಉದ್ದೇಶಕ್ಕಾಗಿ 1071 ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ವಾಪಸ್ ಪಡೆದ ಸರ್ಕಾರದ ಕ್ರಮ ಸ್ವಾಗತಿಸಿ ಫೆ.13ರಂದು ಹಾವೇರಿ ಜಿಲ್ಲೆ ಮೋಟೆ ಬೆನ್ನೂರಿನಲ್ಲಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ವಿದ್ಯಾಸಾಗರ ರಾಮೇಗೌಡ ತಿಳಿಸಿದರು.
ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರ ಖಂಡಿಸಿ ಒಂದು ತಿಂಗಳ ಕಾಲ ಹೆದ್ದಾರಿ ತಡೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ಬಳಿಕ ಸರ್ಕಾರ ಭೂಸ್ವಾಧೀನ ನಿರ್ಧಾರ ವಾಪಸ್ ಪಡೆಯಿತು. ಹೀಗಾಗಿ ವಿಜಯೋತ್ಸವ ಹಾಗೂ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಜಯಂತಿಯನ್ನು ಅಂದು ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವೆಡೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ ಕೈಗಾರಿಕೆ ಆರಂಭವಾಗದೆ ಭೂಮಿ ಪಾಳು ಬಿದ್ದಿದೆ. ಇದಲ್ಲದೆ ಕೈಗಾರಿಕೆ ಆರಂಭವಾಗದ ಕಾರಣ ನಿಯಮದಂತೆ ರೈತರು ಅಥವಾ ಅವರ ಕುಟುಂಬಕ್ಕೆ ಕೆಲಸ ಸಿಗುತ್ತಿಲ್ಲ. ಇನ್ನು ಕಡಕೊಳ ಕೈಗಾರಿಕಾ ಪ್ರದೇಶದ ಆಟೋಲಿವ್ ಕಾರ್ಖಾನೆ ಸಹ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಿಲ್ಲ. ಹೀಗಾಗಿ ಶೀಘ್ರದಲ್ಲೇ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಪದಾಧಿಕಾರಿಗಳಾದ ಮಂಜು ಕಿರಣ್, ಕೃಷ್ಣೇಗೌಡ, ಶಂಕರ ನಾಯಕ್, ಮೋಹನ್, ನಾಗರಾಜ್ ಇದ್ದರು.