13ದಿನ ಬಳಿಕ ನಿಟ್ಟುಸಿರು ಬಿಟ್ಟ ಜನ

carona logo
Published on

ಹಾವೇರಿ: ಜು. 2ರಿಂದ ಸತತವಾಗಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ 13ದಿನಗಳ ನಂತರ ಮಂಗಳವಾರ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ.

ಜು. 2ಕ್ಕೆ 118ರಷ್ಟಿದ್ದ ಸೋಂಕಿತರ ಸಂಖ್ಯೆ ನಂತರ ಸತತವಾಗಿ ಏರಿಕೆ ಕಂಡು ಜು. 13ಕ್ಕೆ 308ಕ್ಕೆ ತಲುಪಿತ್ತು. ಅಲ್ಲದೆ ಜು. 2ರಿಂದ 13ರವರೆಗೆ ಪ್ರತಿದಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಗಳವಾರ ಮಾತ್ರ ಪ್ರಕರಣಗಳು ವರದಿಯಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣವಾದ 12ಜನರನ್ನು ಬಿಡುಗಡೆ ಮಾಡಲಾಗಿದೆ.

ಇಂದಿನಿಂದ ಲಾಕ್​ಡೌನ್

ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ಜು. 15ರಿಂದ ಜು. 31ರವರೆಗೆ ಪ್ರತಿದಿನ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ವ್ಯಾಪಾರ, ವಹಿವಾಟು ನಡೆಸಲು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ನಿರ್ಧರಿಸಿದೆ.

ಎಫ್​ಕೆಸಿಸಿಐ ಸದಸ್ಯ, ವ್ಯಾಪಾರಸ್ಥ ಪಿ.ಡಿ. ಶಿರೂರ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಕಿರಾಣಿ, ಎಪಿಎಂಸಿ, ಜವಳಿ ವ್ಯಾಪಾರಸ್ಥರ ಸಂಘ, ಹೋಟೆಲ್ ಮಾಲೀಕರ ಸಂಘ, ಮದ್ಯ ಮಾರಾಟಗಾರರ ಸಂಘ, ಆಟೋಮೊಬೈಲ್ ಡೀಲರ್ಸ್, ಕೃಷಿ ಉಪಕರಣಗಳ ಮಾರಾಟಗಾರರ ಸಂಘ, ಇಲೆಕ್ಟ್ರಿಕಲ್, ಗೃಹ ಉಪಯೋಗಿ ವ್ಯಾಪಾರಸ್ಥರ ಸಂಘ, ಪೆಟ್ರೋಲಿಯಂ ಡೀಲರ್ಸ್ ಸಂಘ, ಕಟ್ಟಡ ಸಾಮಗ್ರಿ ಪೂರೈಸುವವರ ಸಂಘ, ಸುವರ್ಣಕಾರರ ಸಂಘ, ಕಾಳುಕಡಿ ವ್ಯಾಪಾರಸ್ಥರ ಸಂಘ, ವೈದ್ಯಕೀಯ ಮತ್ತು ಔಷಧ ವ್ಯಾಪಾರಗಳ ಸಂಘ ಸೇರಿ ಪ್ರಮುಖ ವ್ಯಾಪಾರಸ್ಥರು ಪಾಲ್ಗೊಂಡು ನಿರ್ಣಯಿಸಿದ್ದು, ಜನತೆ ಸಹಕಾರ ನೀಡಬೇಕೆಂದು ಸಂಸ್ಥೆಯ ಉಪಾಧ್ಯಕ್ಷ ರವಿ ಮೆಣಸಿನಕಾಯಿ, ಕಾರ್ಯದರ್ಶಿ ಜಿ.ವಿ. ಹಿರೇಗೌಡರ, ಎಫ್​ಕೆಸಿಸಿಐ ಸದಸ್ಯ ಪಿ.ಡಿ. ಶಿರೂರ ಕೋರಿದ್ದಾರೆ.

ಸಾರಿಗೆ ಸಂಸ್ಥೆ ತಾಂತ್ರಿಕ ಸಹಾಯಕನಿಗೆ ಪಾಸಿಟಿವ್

ರಾಣೆಬೆನ್ನೂರ: ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ 36 ವರ್ಷದ ಕೆಎಸ್​ಆರ್​ಟಿಸಿ ನೌಕರನೊಬ್ಬನಿಗೆ ಮಂಗಳವಾರ ಕರೊನಾ ಸೋಂಕು ಇರುವುದು ಧೃಢಪಟ್ಟಿದೆ.

ಈತ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೆಎಸ್​ಆರ್​ಟಿಸಿ ಡಿಪೋದಲ್ಲಿ ತಾಂತ್ರಿಕ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ನೆಗಡಿ, ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಜು. 12ರಂದು ಗಂಟಲ ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಜು. 14ರಂದು ವರದಿ ಪಾಸಿಟಿವ್ ಬಂದಿದೆ.

ತಹಸೀಲ್ದಾರ್ ಕಚೇರಿ ನೌಕರ ಸೇರಿ 10 ಜನ ಕ್ವಾರಂಟೈನ್​ಗೆ

ಸೋಂಕಿತ ವ್ಯಕ್ತಿ ಜು. 12ರಂದು ಸ್ವಗ್ರಾಮ ಚಿಕ್ಕಕುರುವತ್ತಿಗೆ ಬಂದಿದ್ದ. ಈ ಬಗ್ಗೆ ಹೊನ್ನಾಳಿ ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ. ಸೋಂಕಿತನ ತಂದೆ ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ‘ಡಿ’ ಗ್ರುಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಆತನ ಮನೆ ಸೀಲ್​ಡೌನ್ ಮಾಡಿದ್ದು, ಹತ್ತು ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮನೆಯ ಸುತ್ತಲಿನ 150 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ. ಡಿ ಗ್ರುಪ್ ನೌಕರನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ವಾಗೀಶ ಮಳಿಮಠ ತಿಳಿಸಿದ್ದಾರೆ.

ಕುಂಚೂರು-ಶಿರಗಂಬಿ-ರಾಮತೀರ್ಥ ಗ್ರಾಮಗಳಲ್ಲಿ ಸೀಲ್​ಡೌನ್

ರಟ್ಟಿಹಳ್ಳಿ: ತಾಲೂಕಿನ ಕುಂಚೂರು, ಶಿರಗಂಬಿ ಮತ್ತು ರಾಮತೀರ್ಥ ಗ್ರಾಮಗಳಲ್ಲಿ ಮಂಗಳವಾರ 3 ಕರೊನಾ ಸೋಂಕು ಪ್ರಕರಣ ದೃಢವಾಗಿದ್ದರಿಂದ ಗ್ರಾಮದ ಓಣಿಗಳನ್ನು ಸೀಲ್​ಡೌನ್ ಮಾಡಲಾಗಿದೆ.

ತಾಲೂಕಿಗೆ ಇತರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಮಾಡಬೇಕು. ತಮ್ಮ ಗಂಟಲ ದ್ರವ ಮಾದರಿಯನ್ನು ಪಟ್ಟಣದ ಆರೋಗ್ಯ ಕೇಂದ್ರ, ಮಾಸೂರು ಸಮುದಾಯ ಆರೋಗ್ಯ ಕೇಂದ್ರ ಮತ್ತು ಹಿರೇಕೆರೂರು ತಾಲೂಕು ಆಸ್ಪತ್ರೆಯಲ್ಲಿ ಸ್ವಾ್ಯಬ್ ಪರೀಕ್ಷೆಯನ್ನು ಸ್ವಯಂಪ್ರೇರಿತರಾಗಿ ಮಾಡಿಸಿಕೊಂಡು ಸಮಾಜದ ಉತ್ತಮ ಆರೋಗ್ಯಕ್ಕೆ ಸಹಕರಿಸಬೇಕು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಕರೊನಾ ಅಂಕಿಅಂಶಗಳು...

ಇಂದಿನ ಸೋಂಕು ಪ್ರಕರಣ 00

ಇಂದು ಗುಣವಾಗಿ ಬಿಡುಗಡೆಯಾದವರು 12

ಮಂದಿಯ ಗಂಟಲು ದ್ರವ ಸಂಗ್ರಹಣೆ 104

ಮೃತರು 7

ಇದುವರೆಗೆ 2464 ನಿಗಾದಲ್ಲಿರುವವರು

1173 14ದಿನ ಹೋಂ ಕ್ವಾರಂಟೈನ್​ನಲ್ಲಿರುವವರು

1 ಆಸ್ಪತ್ರೆಗಳಲ್ಲಿ ಐಸೋಲೇಷನ್ ವ್ಯವಸ್ಥೆಯಲ್ಲಿರುವವರು

308 ಪಾಸಿಟಿವ್ ಪ್ರಕರಣ

182 ಗುಣವಾಗಿ ಬಿಡುಗಡೆಯಾದವರು

119 ಸಕ್ರಿಯ ಪ್ರಕರಣಗಳು

396 ಬಾಕಿಯಿರುವ ವರದಿಗಳು

15592 ನೆಗೆಟಿವ್ ಮಾದರಿಗಳು

ಕರೊನಾ ಸಹಾಯವಾಣಿ

ಡಿಸಿ ಕಚೇರಿ

08375-249102/103/104

ವಾಟ್ಸ್ ಆಪ್

08375-249102/103/104

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net