

ಕೊಳ್ಳೇಗಾಲ: ಬಸ್ತೀಪುರ ಬಡಾವಣೆಯಲ್ಲಿ ನಡೆಯುವ ಶ್ರೀ ಸಿದ್ದಪ್ಪಾಜಿ ಹಾಗೂ ಶ್ರೀ ಮಂಟೇಸ್ವಾಮಿ ಕೊಂಡೋತ್ಸವ ಹಬ್ಬದಲ್ಲಿ ಗ್ರಾಮಸ್ಥರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸೌಹಾರ್ದಯುತವಾಗಿ ಅಚರಣೆ ಮಾಡಬೇಕು ಎಂದು ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಕೆ. ಮಹೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಜೂ.13 ಮತ್ತು 14 ರಂದು ವಿಜೃಂಭಣೆಯಿಂದ ನಡೆಯುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಸಂಬಂಧ ಗ್ರಾಮದ ವಿವಿಧ ಕೋಮಿನ ಮುಖಂಡರ ಜತೆ ಬುಧವಾರ ಶಾಂತಿ ಸಭೆ ನಡೆಸಿ ಮಾತನಾಡಿದರು.
ಗ್ರಾಮದ ವಿವಿಧ ಸಮುದಾಯದ ಜನರು ಒಗ್ಗಟ್ಟಿನಿಂದ ಹಿಂದಿನಿಂದಲೂ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವವನ್ನು ಆಚರಣೆ ಮಾಡಿಕೊಂಡು ಬಂದಿರುವುದು ಶ್ಲಾಘಿಸುವ ವಿಚಾರವಾಗಿದೆ. ಶಾಂತಿ, ಸೌಹರ್ದಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ತಮಗೆ ಅಗತ್ಯವಿರುವ ಸಹಕಾರ ನೀಡುತ್ತದೆ. ಆದರೆ ಯಾರಾದರೂ ಕಾನೂನು ಸುವ್ಯವಸ್ಥೆಗೆ ತೊಡಕಾಗುವ ರೀತಿ ವರ್ತಿಸಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುತ್ತವೆ ಎಂದು ಹೇಳಿದರು.
ಈ ವೇಳೆ ಗ್ರಾಮದ ವಿವಿಧ ಕೋಮಿನ ಮುಖಂಡರು ಮಾತನಾಡಿ, ಜೂ.14 ರಂದು ಬೆಳಗ್ಗೆ ನಡೆಯುವ ಕೊಂಡೋತ್ಸವಕ್ಕೆ ಬೇಕಾದ ಮರದ ಸೌದೆಗಳನ್ನು ಜೂ.13ರಂದು ಎತ್ತಿನ ಗಾಡಿಗಳಲ್ಲಿ ತುಂಬಿಕೊಂಡು ಮೆರವಣಿಗೆ ಮೂಲಕ ಬಡಾವಣೆಗೆ ತರಲಾಗುತ್ತದೆ. ಮೆರವಣಿಗೆಗೆ ಡಾ.ಬಿ.ಆರ್.ಪ್ರತಿಮೆ ಮುಂಭಾಗದಿಂದ ಚಾಲನೆ ದೊರೆಯಲಿದೆ. ಈ ವೇಳೆ ಹಾಗೂ ಹಬ್ಬದ ಎರಡು ದಿನಗಳ ಕಾಲ ಬಿಗಿ ಪೊಲೀಸ್ ಬಸ್ ವ್ಯವಸ್ಥೆ ಮಾಡಿ ಕೊಡುವಂತೆ ಪೊಲೀಸ್‌ರನ್ನು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಮುನಿವೀರೇಗೌಡ, ಗ್ರಾಮದ ಯಜಮಾನರಾದ ಬೋಳೆಗೌಡ, ಶಿವಕುಮಾರ್, ಪುಟ್ಟಮಾದಯ್ಯ, ಸಿದ್ದನಾಯಕ ಮುಖಂಡ ರವಿ ಬಸ್ತೀಪುರ ಹಾಗೂ ನಗರಸಭೆ ಸದಸ್ಯ ಶಾಂತರಾಜ್ ಬಸ್ತೀಪುರ ಮತ್ತಿತರರಿದ್ದರು.