

ಅರಕಲಗೂಡು: ಇತಿಹಾಸ ಪ್ರಸಿದ್ದ ರಾಮನಾಥಪುರದ ಪವಿತ್ರ ನಾಗಕ್ಷೇತ್ರ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಚಂಪಾಷಷ್ಠಿ ಮಹಾ ರಥೋತ್ಸವ ಮಂಗಳವಾರ ಸಕಲ ಧಾರ್ಮಿಕ ವಿಧಾನಗಳನ್ವಯ ಬಹು ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯಲ್ಲಿ ಜನಸಾಗರವೇ ನೆರೆದಿತ್ತು. ರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳ ಪ್ರಾಕಾರದ ಸುತ್ತ ಬಗೆ ಬಗೆಯ ಹೂವಿನ ಹಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಪಾರುಪತ್ತೇದಾರ್ ರಮೇಶಭಟ್ ಅವರ ಧಾರ್ಮಿಕ ಮುಖಂಡತ್ವದಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ಸಾಗಿದವು. ಮೂಲ ದೇವರ ಗುಡಿಯಲ್ಲಿ ನಾಗಪ್ಪನಿಗೆ ಉಯ್ಯಲೆ ತೊಟ್ಟಿಲು ಸೇವೆ ಸಲ್ಲಿಸಲಾಯಿತು. ದೇವರ ಉತ್ಸವ ಮೂರ್ತಿಯನ್ನು ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥಾರೋಹಣದ ನಡೆಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 12 ಗಂಟೆಗೆ ಅಭಿಜನ್ ಮುಹೂರ್ತದಲ್ಲಿ ಆಕಾಶದಲ್ಲಿ ಗರುಡ ಪಕ್ಷಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದಾಗ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದಿದ್ದ ಭಕ್ತರು ಜಯಘೋಷಗಳ ನಡುವೆ ತೇರು ಮುಂದೆ ಸಾಗಿತು. ರಥ ಮುಂದೆ ಚಲಿಸುವಾಗ ಭಕ್ತರು ಹಣ್ಣ ಜವನ ಎಸೆದರು. ದಕ್ಷಿಣ ಕನ್ನಡ ಶೈಲಿಯ ಚಂಡೆ ಮದ್ದಳೆ ವಾದ್ಯಗೋಷ್ಠಿ ನೀನಾದದೊಂದಿಗೆ ವೇಷಧಾರಿ ಆಕರ್ಷಕ ಬೊಂಬೆ ಕುಣಿತ ಪ್ರದರ್ಶನ ನೀಡಿ ರಥ ಹಿಂಬಾಲಿಸಿದ್ದು ಗಮನ ಸೆಳೆಯಿತು. ದೇವಸ್ಥಾನದ ರಥ ಬೀದಿಯಲ್ಲಿ ಕಾವೇರಿ ನದಿಯ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸೂಸುತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಾಗ್ರಿಗಳೊಂದಿಗೆ ಆಗಮಿಸಿದ್ದ ಸಾವಿರಾರು ಭಕ್ತರು ಈಡುಗಾಯಿ ಒಡೆದು ತೇರಿತನತ್ತ ಹಣ್ಣು- ಜವನ ತೂರಿ ಭಕ್ತಿ ಪರಾಕಾಷ್ಠೆ ಮೆರೆದರು.
ಬೆಳಗಿನಿಂದಲೇ ಸಾವಿರಾರು ಭಕ್ತರು ಪವಿತ್ರ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಕೆಲವರು ತಲೆಮುಡಿ ಅರ್ಪಿಸಿ ಹರಕೆ ತೀರಿಸಿದರು. ಹಣ್ಣು ತುಪ್ಪ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಹೊಂದಿದರು.
ದೇವಸ್ಥಾನದೊಳಗೆ ಭಕ್ತರು ಸರದಿ ಸಾಲಿನಲ್ಲಿ ಬರಲು ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿತ್ತು. ಬೆಳಗ್ಗೆಯಿಂದ ಸಂಜೆ ತನಕವೂ ಭಕ್ತರ ಪ್ರವಾಹ ಅಧಿಕವಾಗಿತ್ತು. ಭಕ್ತರು ಪೂಜೆ ಸಾಮಾಗ್ರಿಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದರು. ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮುಂಭಾಗ ನೂಕುನುಗ್ಗಲನ್ನು ಲೆಕ್ಕಿಸದೆ ಪೂಜೆ ಸಲ್ಲಿಸಲು ಮುಗಿ ಬೀಳುತ್ತಿದ್ದರು. ಈಡುಗಾಯಿ ಒಡೆದು ಕರ್ಪೂರ ಉರಿಸಿ ಹಣ್ಣು ಕಾಯಿ ಅರ್ಪಿಸಿ ಭಕ್ತಿ ಭಾವ ಪ್ರದರ್ಶಿಸಿದರು.
ಸಂಪ್ರದಾಯದಂತೆ ಹೊಸದಾಗಿ ಮದುವೆಯಾದ ನವ ಜೋಡಿಗಳು ರಥೋತ್ಸವಕ್ಕೆ ಅಗಮಿಸಿ ದೇವರ ದರ್ಶನ ಪಡೆದರು. ನದಿಯಲ್ಲಿ ಸ್ನಾನ ಮಾಡಿ ಹಲವಾರು ಭಕ್ತರು ಉರುಳು ಸೇವೆ ಮಾಡಿದರು. ನದಿಯ ವಹ್ನಿಪುಷ್ಕರಣಿ, ಗಾಯತ್ರೀ ಶಿಲೆ, ಗೋಗರ್ಭ, ಗೌತಮ ಶಿಲೆ, ಕುಮಾರಧಾರಾ ತೀರ್ಥ ದರ್ಶನ ಪಡೆದು ಶ್ರೀ ಅಗಸ್ತ್ಯೇಶ್ವರ, ಅಂಜನೇಯಸ್ವಾಮಿ, ಪಟ್ಟಾಭಿರಾಮ, ವರದಾನ ಬಸವೇಶ್ವರ ಮುಂತಾದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದಲ್ಲಿ ನೂಕು ನುಗ್ಗಲು ನಿಯಂತ್ರಿಸುತ್ತಿದ್ದ ಸ್ವಯಂ ಸೇವಕರು ಸರದಿ ಸಾಲಿನಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ನೆರವಾದರು. ಜಾತ್ರೆಯಲ್ಲಿ ಕಟ್ಟಿದ್ದ ಅಂಗಡಿಗಳಲ್ಲಿ ವಿವಿಧ ವಸ್ತುಗಳ ವ್ಯಾಪರ ಜೋರಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ರಘುಪತಿ, ಸಬ್‌ಇನ್ಸ್‌ಪೆಕ್ಟರ್ ಧನರಾಜ್, ಮಂಜುನಾಥ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಜಾಪಿತ ಬ್ರಹ್ಮಕುಮಾರ್ ಈಶ್ವರೀಯ ಸಂಸ್ಥೆ ವತಿಯಿಂದ ಆಧ್ಯಾತ್ಮಿಕ ಚಿತ್ರ ಪ್ರದರ್ಶಿಸಲಾಯಿತು.
ರಥೋತ್ಸವದಲ್ಲಿ ತೇರು ಸಂಪನ್ನಗೊಂಡ ಬಳಿಕ ದೇವಸ್ಥಾನದ ಒಳಾಂಗಣದ ಸುತ್ತ ನಡೆದ ನಾಗದೇವರ ಪ್ರದಕ್ಷಿಣೆ ವೇಳೆ ಭಕ್ತರು ಮೂರು ಸುತ್ತು ಬೆಳ್ಳಿರಥ ಎಳೆದು ಪೂಜೆ ಸಲ್ಲಿಸಿದರು. ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಶಾಸಕರಾದ ಎಚ್.ಡಿ. ರೇವಣ್ಣ, ಸೂರಜ್ ರೇವಣ್ಣ, ಬಿಜೆಪಿ ಮುಖಂಡ ಎಚ್. ಯೋಗಾ ರಮೇಶ್, ಕಾಂಗ್ರೆಸ್ ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಎಂ.ಟಿ. ಕೃಷ್ಣೇಗೌಡದ ರಥೋತ್ಸವದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಮಾಜದ ಮುಖಂಡರು ಹಾಗೂ ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡರ ಅಭಿಮಾನಿಗಳು ಅನ್ನ ಸಂತರ್ಪಣೆ ನಡೆಸಿ ಜಾತ್ರೆಗೆ ಬಂದ ಭಕ್ತರ ಹಸಿವು ನೀಗಿಸಿದರು. ಮಜ್ಜಿಗೆ ಪಾನಕ, ಪ್ರಸಾದ ವಿನಿಯೋಗ ನಡೆಯಿತು.