ರಾಜ್ಯದಲ್ಲಿ 139 ಅನ್ನದಾತರ ಆತ್ಮಹತ್ಯೆ; ತ್ವರಿತ ಪರಿಹಾರಕ್ಕೆ ಈಶ್ವರಪ್ಪ ಆಗ್ರಹ

K S ESHWARAPPA
ವಿಜಯಪುರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿದರು. ಮಾಜಿ ಸಚಿವ ಕೋಟಶ್ರೀನಿವಾಸ ಪೂಜಾರಿ, ಸಂಸದ ರಮೇಶ ಜಿಗಜಿಣಗಿ, ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯದಲ್ಲಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈವರೆಗೆ 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಪರಿಹಾರ ವಿತರಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಭರಾಟೆ ರೈತರ ಸಮಸ್ಯೆ ಅರಿಯುವಲ್ಲಿ ವಿಫಲವಾಗಿದೆ. ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ. ರೈತರು ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಅವಮಾನ ಮಾಡುತ್ತಿದ್ದಾರೆ. ಇನ್ನೂ ಹನಿಮೂನ್ ಪಿರಿಯೇಡ್‌ನಲ್ಲಿಯೇ ಇರುವ ಮಂತ್ರಿಗಳಿಗೆ ರೈತರ ನೋವು ಅರ್ಥವಾಗುತ್ತಿಲ್ಲ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕಾರ್ಯಗಳಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ಹೊರಹಾಕಿದರು.

ಸರ್ಕಾರವೇ ಹೇಳುವ ಅಂಕಿ ಅಂಶಗಳ ಪ್ರಕಾರ 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅತೀವೃಷ್ಠಿ-ಅನಾವೃಷ್ಠಿಯೇ ಕಾರಣ. ಕಳೆದ ಎರಡು ತಿಂಗಳಿನಿಂದ ಬರ ಘೋಷಣೆ ಮಾಡುತ್ತೇವೆಂದು ಸರ್ಕಾರ ಹೇಳುತ್ತಲೇ ಇದೆ. ಈವರೆಗೂ ಘೋಷಣೆ ಮಾಡಿಲ್ಲ. ಸರ್ಕಾರದ ಬಳಿ ಅಂಕಿ ಅಂಶ ಇದ್ದರೂ ವಿಳಂಬ ಮಾಡುತ್ತಿದೆ. ರಾಜಕಾರಣ ಏನೇ ಇರಲಿ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣಕ್ಕೆ ಪರಿಹಾರ ಕೊಡಬೇಕು. ಪರಿಹಾರಕ್ಕಾಗಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೆ ಸಾಲದು. ಖುದ್ದಾಗಿ ಭೇಡಿ ಪ್ರಧಾನ ಮಂತ್ರಿಗಳ ಬಳಿ ಮನವಿ ಮಾಡಬೇಕು. ಸರ್ವಪಕ್ಷ ನಿಯೋಗ ಕರೆದರೆ ಅದಕ್ಕೆ ತಾವು ಸಿದ್ಧ. ರಾಜಕಾರಣ ಏನೇ ಇರಲಿ ಸಂತ್ರಸ್ಥರಿಗೆ ಮೊದಲು ಪರಿಹಾರ ಸಿಗಲಿ ಎಂದರು.

ಸರ್ಕಾರದ ಬಗ್ಗೆ ಜನ ಅಸಮಾಧಾನ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ರಸ್ತೆ, ಶಾಲೆ- ಅಂಗನವಾಡಿ ರಿಪೇರಿ ಆಗಿಲ್ಲ. ಬಡವರಿಗೆ ಆಶ್ರಯ ಮನೆ ಕಟ್ಟಿ ಕೊಟ್ಟಿಲ್ಲ. ಆಶ್ರಯ ಮನೆಗಳ ಗುತ್ತಿಗೆದಾರರಿಗೆ ಇನ್ನೂ ಹಣ ಕೊಡದ ಹಿನ್ನೆಲೆ ಮನೆಗಳು ಅರ್ಧಕ್ಕೆ ನಿಂತಿವೆ. ಶಾಸಕರು ಅಭಿವೃದ್ಧಿಗೆ ಹಣ ಕೇಳಬಾರದೆಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬ ಭಾವ ಜನರಲ್ಲಿ ಮೂಡಿದೆ. ಜನ ಶಾಪ ಹಾಕುತ್ತಿದ್ದಾರೆ. ಯಾಕಾದರೂ ಈ ಸರ್ಕಾರ ತಂದೆವೋ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ರಾಜ್ಯದಲ್ಲಿರುವ 6.5 ಕೋಟಿ ಜನರ ಪೈಕಿ ಕೇವಲ 1.5 ಕೋಟಿ ಜನರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಇನ್ನುಳಿದ ಐದು ಕೋಟಿ ಜನರ ಗತಿ ಏನು? ಎಂದು ಈ ಈಶ್ವರಪ್ಪ ಪ್ರಶ್ನಿಸಿದರು.

ಶಾಸಕರಿಂದಲೇ ಅಸಮಾಧಾನ

ಹೆಸ್ಕಾಂ ಅಧಿಕಾರಿ ನನ್ನ ಫೋನ್ ತೆಗೆಯಲ್ಲ, ನನ್ನ ಮಾತು ಕೇಳಲ್ಲ ಎಂದು ಬಸವರಾಜ ರಾಯರೆಡ್ಡಿ ಅವರೇ ಸಿಎಂಗೆ ಪತ್ರ ಬರೆಯುತ್ತಾರೆ. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ರಾಯರಡ್ಡಿ ಅವರನ್ನು ಸಮಾಧಾನ ಪಡಿಸಲಾಗುತ್ತದೆ. ಹರಿಪ್ರಸಾದ ಅವರು ತಮಗೆ ‘ಸರ್ಕಾರ ತರೋದು ಗೊತ್ತು, ತೆಗೆಯೋದೂ ಗೊತ್ತು’ ಎನ್ನುತ್ತಾರೆ. ಮುನಿಯಪ್ಪ ಅವರು ಹಿರಿಯರು ಕಿರಿಯರಿಗೆ ಅಧಿಕಾರ ಬಿಟ್ಟು ಕೊಡಬೇಕೆನ್ನುತ್ತಾರೆ. ಇದೆಲ್ಲಾ ಕಾಂಗ್ರೆಸ್‌ನಲ್ಲಿ ಅಸ್ಥಿರತೆ ಕಾಡುತ್ತಿದೆ ಎಂಬುದಕ್ಕೆ ಉದಾಹರಣೆ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಕಾಸುಗೌಡ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net