

ತುಮಕೂರು: ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೊದಲದಿನ ಸುಸೂತ್ರವಾಗಿ ನಡೆಯಿತು.
ಜಿಲ್ಲಾ ಕೇಂದ್ರ ತುಮಕೂರಿನಲ್ಲಿ 13 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು 21 ಕೇಂದ್ರಗಳಲ್ಲಿ ಸಿಇಟಿ ನಡೆಯಿತು. ಗುರುವಾರ ಬೆಳಗ್ಗೆ 10.30 ರಿಂದ 11.50ರವರೆಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ 6590 ವಿದ್ಯಾರ್ಥಿಗಳು ಹಾಜರಾಗಿದ್ದು, 1381 ವಿದ್ಯಾರ್ಥಿಗಳು ಗೈರಾಗಿದ್ದರು. ಮಧ್ಯಾಹ್ನ ನಡೆದ ಗಣಿತಶಾಸ್ತ್ರ ಪರೀಕ್ಷೆಗೆ 7221 ವಿದ್ಯಾರ್ಥಿಗಳು ಹಾಜರಾಗಿದ್ದು, 750 ವಿದ್ಯಾರ್ಥಿಗಳು ಗೈರಾಗಿದ್ದರು.
ಥರ್ಮಲ್ ಸ್ಕ್ರೀನಿಂಗ್: ಜಿಲ್ಲಾಕೇಂದ್ರ ತುಮಕೂರಿನಲ್ಲಿ 13 ಪರೀಕ್ಷಾ ಕೇಂದ್ರ ಸೇರಿ ತಿಪಟೂರು, ಶಿರಾದಲ್ಲಿ ತಲಾ 2 ಕೇಂದ್ರ, ತುರುವೇಕೆರೆ, ಕುಣಿಗಲ್, ಪಾವಗಡ ಹಾಗೂ ಕೊರಟಗೆರೆಯಲ್ಲಿ ತಲಾ 1 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದು, ಬೆಳಗ್ಗೆ 8 ರಿಂದಲೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ಆರೋಗ್ಯ ತಪಾಸಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುವು ಮಾಡಿಕೊಡಲಾಯಿತು. ಗುಬ್ಬಿ, ಚಿಕ್ಕನಾಯಕನಹಳ್ಳಿಯಲ್ಲಿ ಪರೀಕ್ಷಾ ಕೇಂದ್ರ ಇರಲಿಲ್ಲ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆವಹಿಸಿದ್ದ ವಿದ್ಯಾರ್ಥಿಗಳೇ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡಿದ್ದು ಎಲ್ಲೆಡೆ ಕಂಡುಬಂದಿತ್ತು. ಗೊಂದಲಕ್ಕೆ ಅವಕಾಶ ಮಾಡಿಕೊಡದೆ ವಿದ್ಯಾರ್ಥಿಗಳೇ ಥರ್ಮಲ್‌ಸ್ಕ್ರೀನಿಂಗ್ ಒಳಪಟ್ಟ ಬಳಿಕ ಕೈಗೆ ಸ್ಯಾನಿಟೈಸರ್ ಹಾಕಿಕೊಂಡು ನಂತರ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆ ಇರುವ ಕಡೆ ಆಸೀನರಾಗಿ ಪರೀಕ್ಷೆ ಬರೆದರು.
ಇಂದು ಭೌತಶಾಸ್ತ್ರ, ರಸಾಯನಶಾಸ್ತ್ರ : ಜುಲೈ 31ರ ಬೆಳಗ್ಗೆ 10.30 ರಿಂದ 11.50 ಗಂಟೆಯವರೆಗೆ ಭೌತಶಾಸ್ತ್ರ ಹಾಗೂ 2.30 ರಿಂದ 3.50 ಗಂಟೆಯವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.
ಪ್ರತ್ಯೇಕ ಪರೀಕ್ಷೆ ಬರೆದ ಐವರು!: ಕಂಟೇನ್ಮೆಂಟ್ ವಲಯದಿಂದ ಬಂದಿದ್ದ ಐವರು ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಾಗಿ ಮೇಲ್ವಿಚಾರಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲು ಅವಕಾಶ ಮಾಡಿಕೊಡಲಾಯಿತು.
ಸಿಇಟಿ ಮೊದಲ ದಿನ ಸುಸೂತ್ರವಾಗಿ ನಡೆಯಿತು. ಎಲ್ಲಿಯೂ ಗೊಂದಲ, ತೊಂದರೆಯಾದ ವರದಿಬಂದಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಗುರುವಾರ ಪರೀಕ್ಷೆ ಬರೆದ ಬಳಿಕ ಮತ್ತೊಮ್ಮೆ ಸ್ಯಾನಿಟೈಸ್ ಮಾಡಿ ಶುಕ್ರವಾರದ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ಎಚ್.ಕೆ. ನರಸಿಂಹಮೂರ್ತಿ ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ