ಬೆಳಗಾವಿಯಲ್ಲಿ ಬೆಳಕಿನ ಹಬ್ಬ ಬಲುಜೋರು

24-33
ಬೆಳಗಾವಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ತಹರೇವಾರಿ ಆಕಾಶ ಬುಟ್ಟಿಗಳು ಜನತೆಯನ್ನು ಆಕರ್ಷಿಸಿದವು.
Published on

ಬೆಳಗಾವಿ: ಹಣತೆಗಳ ಹಬ್ಬ ದೀಪಾವಳಿ ಕಾರಣ ಬೆಳಗಾವಿ ಮಾರುಕಟ್ಟೆಗೆ ಜೀವಕಳೆ ಬಂದಿದ್ದು, ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕು ಮಟ್ಟದ ಪಟ್ಟಣಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಹತ್ತು ಹಲವು ಸಂಸ್ಕೃತಿಗಳ ಸಂಗಮವಾಗಿರುವ ಗಡಿನಾಡು ಬೆಳಗಾವಿಯಲ್ಲಿ ಆಚರಣೆ ಮಾತ್ರವಲ್ಲ. ಮಾರುಕಟ್ಟೆ ಕೂಡ ಅಷ್ಟೇ ಶ್ರೀಮಂತ. ಜಿಲ್ಲೆಯ ವಿವಿಧ ತಾಲೂಕು ಪ್ರದೇಶ ಹಾಗೂ ಹೊರ ಜಿಲ್ಲೆ ಮತ್ತು ಗೋವಾ ಮಹಾರಾಷ್ಟ್ರದ ಜನತೆ ದೀಪಾವಳಿ ಹಬ್ಬದ ಖರೀದಿಗೆ ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಆಗಮಿಸಿ ಬಟ್ಟೆ, ಬಂಗಾರ ಹಾಗೂ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಕಾರು ಹಾಗೂ ದ್ವಿಚಕ್ರ ವಾಹನ ಶೋ ರೂಂಗಳಲ್ಲಿ ಜನಜಂಗುಳಿ ಉಂಟಾಗಿದ್ದು, ಆಕಾಶ ಬುಟ್ಟಿ ಹಾಗೂ ವಿದ್ಯುತ್ ದೀಪಗಳ ಅಲಂಕಾರಕ್ಕಾಗಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದರು. ದೀಪಾವಳಿ ವ್ಯಾಪಾರಿಗಳ ಪಾಲಿಗೆ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ವ್ಯಾಪಾರಸ್ಥರು ಪೈಪೋಟಿಗೆ ಬಿದ್ದಂತೆ ಗ್ರಾಹಕರಿಗೆ ಒಂದು ಖರೀದಿಸಿದರೆ ಮತ್ತೊಂದು ಉಚಿತ, 10, 20 ರಿಂದ ಶೇ 50 ರಷ್ಟು ರಿಯಾಯಿತಿ ಕೊಡುಗೆಗಳ ಆಫರ್ ಸಾಮಾನ್ಯವಾಗಿದೆ.

ಆಭರಣ ಪ್ರಿಯರು ಗಣಪತಿ ಗಲ್ಲಿ, ಖಡೇಬಜಾರ್ ಹಾಗೂ ಶಹಾಪುರದ ಮಾರುಕಟ್ಟೆಯಲ್ಲಿನ ಜ್ಯುವೆಲರ್ಸ್‌ ಗಳಲ್ಲಿ ಚನ್ನಾಭರಣ ಖರೀದಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನರಕ ಚತುರ್ಥಿ ಹಾಗೂ ಪಾಢ್ಯಮಿಯಂದು ಬಂಗಾರ ಖರೀದಿಗೆ ಶುಭ ದಿನವಾಗಿರುವುದರಿಂದ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಚಿನ್ನಾಭರಣಗಳ ವ್ಯಾಪಾರಸ್ಥರು. ಲಕ್ಷ್ಮೀದೇವಿ ವಿಶೇಷ ಅಲಂಕಾರಕ್ಕಾಗಿ ಪೂಜಾ ಸಮಾಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ನಗರದ ಗಣಪತಿ ಗಲ್ಲಿ, ಪಾಂಗುಳಗಲ್ಲಿ, ಮಾರುತಿಗಲ್ಲಿ, ಬಾಪಟಗಲ್ಲಿಯ ನಾವೆಲ್ಟಿಸ್ ಮಳಿಗೆಗಳಿಗೆ ತೆರಳಿ ಖುಷಿ ಖುಷಿಯಾಗಿ ಕೊಂಡುಕೊಳ್ಳುವಲ್ಲಿ ಮಹಿಳಾ ಗ್ರಾಹಕರು ತಲ್ಲೀನರಾಗಿದ್ದರು. ಹೊಸದಾಗಿ ಬಂದಿರುವ ನೂತನ ಡಿಸೈನರ್ ಸೀರೆ, ಚೂಡಿದಾರ್ ಹಾಗೂ ಗಾಗ್ರಾ ಸೇರಿ ವಿವಿಧ ಬಗೆಯ ಉಡುಗೆ-ತೊಡುಗೆಳ ಖರೀದಿಗೆ ಮುಗಿಬಿದ್ದಿದ್ದ ಭಾನುವಾರ ಕಂಡುಬಂದಿತು. ಕಿರಾಣಿ ಅಂಗಡಿ, ಗ್ಯಾರೇಜ್, ಬೇಕರಿ, ರಸಗೊಬ್ಬರ ಅಂಗಡಿ, ಬಟ್ಟೆ ವ್ಯಾಪಾರಿಗಳು, ಚಿನ್ನಾಭರಣ ಹಾಗೂ ವಾಹನ ಮಾರಾಟ ಮಳಿಗೆಗಳೂ ಸಹ ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ.

ಭರ್ಜರಿ ಹೂವು ವ್ಯಾಪಾರ: ಅಂಗಡಿ ಮುಂಗಟ್ಟು ಹಾಗೂ ವಾಹನ ಪೂಜೆಗಳಿಗೆ ಅತ್ಯಗತ್ಯವಾಗಿರುವ ಕಬ್ಬು (ಜೋಡಿ) 40 ರಿಂದ 100 ರೂ., ಒಂದು ಜೋಡಿ ಬಾಳೆಗಿಡಕ್ಕೆ ಅವುಗಳ ಗಾತ್ರಕ್ಕೆ ತಕ್ಕಂತೆ 50 ರಿಂದ 400 ರೂ.ಗಳಿಗೆ ಜೋಡಿ, ಬೂದು ಕುಂಬಳಕಾಯಿ ಕೆಜಿಗೆ 30 ರೂ.(ಗಾತ್ರಕ್ಕೆ ತಕ್ಕಂತೆ 50 ರಿಂದ 200 ರೂ) ತೆಂಗಿನಕಾಯಿ ಒಂದಕ್ಕೆ 30 ರೂ., ಮಾವಿನ ತೋರಣ ಹಾಗೂ ಬನ್ನಿ ಕಟ್ಟಿಗೆ 5ರಿಂದ 15 ರೂ., ಏಲಕ್ಕಿ ಬಾಳೆ ಕೆ.ಜಿಗೆ 85 ರೂ. ಪಚ್ಚ ಬಾಳೆ 40 ರಿಂದ 60ರೂ.ಗೆ ಡಜನ್, ಕಿತ್ತಳೆ ಹಾಗೂ ಮೋಸಂಬಿ 100 ರೂ., ಸೇಬು ಹಾಗೂ ದಾಳಿಂಬೆ -80 ರಿಂದ 120, ಚಿಕ್ಕು 80 ರಿಂದ 100 ರೂ. ವರಗೆ ಬೆಲೆ ನಿಗದಿಪಡಿಸಲಾಗಿತ್ತು.

ಇಲ್ಲಿನ ಗಾಂಧಿನಗರದಲ್ಲಿರುವ ಹೋಲ್‌ಸೇಲ್ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಬಿಡಿ ಹೂವು ಕೆ.ಜಿಗೆ 800 ರೂ., ಕನಕಾಂಬರ 1,500 ರೂ., ಗುಲಾಬಿ 160 ರೂ., ಬಿಳಿ ಸೇವಂತಿಗೆ ಹೂವು 120, ಚೆಂಡು ಹೂವು 40 ರಿಂದ 70 ರೂ. ದರ ನಿಗದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net