ಸಂಚಾರ ನಿಯಮ ಉಲ್ಲಂಘನೆ ವಿರುದ್ಧ 1372 ಪ್ರಕರಣ, 6.24 ಲಕ್ಷ ರೂ. ದಂಡ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಕಳೆದ ಒಂದು ವಾರದ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 1372 ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, 6,24,500 ರೂ. ದಂಡ ಸಂಗ್ರಹಿಸಲಾಗಿದೆ.
ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರು ಮತ್ತು ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪುವ ಹಾಗೂ ಗಂಭೀರವಾಗಿ ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದಾಗಿದೆ. ಇದೇ ರೀತಿಯಾಗಿ, ಸಮಯ ಉಳಿಸುವ ಉದ್ದೇಶದಿಂದ ಅಥವಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದರಿಂದ ಮುಖಾಮುಖಿ ಡಿಕ್ಕಿ, ಪಾದಚಾರಿಗಳಿಗೆ ಅಪಾಯ ಹಾಗೂ ಇತರೆ ವಾಹನಗಳಿಗೆ ತೊಂದರೆಯಾಗುವ ಘಟನೆಗಳು ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಚರಣೆಯ ವೇಳೆ ನಗರದ ಪ್ರಮುಖ ಜಂಕ್ಷನ್‌ಗಳು, ಎನ್.ಹೆಚ್.-66 ಮತ್ತು 169 ಹೆದ್ದಾರಿಗಳಲ್ಲಿ, ನಗರದ ಹೊರವಲಯಗಳಲ್ಲಿ ಹಾಗೂ ಅಪಘಾತ ಹೆಚ್ಚಾಗಿ ಸಂಭವಿಸುವ ಸ್ಥಳಗಳಲ್ಲಿ ವಿಶೇಷ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದವರ ವಿರುದ್ಧ 1050 ಪ್ರಕರಣಗಳನ್ನು ದಾಖಲಿಸಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಒಟ್ಟು 4,63,500ರೂ. ದಂಡ ವಿಧಿಸಲಾಗಿದೆ. ಅದೇ ರೀತಿ, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ 322 ಪ್ರಕರಣಗಳು ಪತ್ತೆಯಾಗಿದ್ದು, ಸದರಿ ವಾಹನ ಸವಾರರಿಗೆ ಒಟ್ಟು 1,61,000 ರೂ. ದಂಡ ವಿಧಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 1372 ದ್ವಿ-ಚಕ್ರ ವಾಹನಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಹೆಚ್ಚುವರಿ ಹೈವೇ ಪೆಟ್ರೋಲ್ ವಾಹನ
ರಾಷ್ಟೀಯ ಹೆದ್ದಾರಿ-169 (ಬಿಕರ್ನಕಟ್ಟೆ -ಮೂಡುಬಿದಿರೆ - ಬೆಳುವಾಯಿ ರಸ್ತೆ) ಯಲ್ಲಿ ನಡೆಯುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಶೀಘ್ರವಾಗಿ ಸ್ಪಂದಿಸಲು, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎನ್.ಹೆಚ್. 169 ಹೆದ್ದಾರಿಯ ಬೈತುರ್ಲಿಯಿಂದ ಮೀಜಾರ್ ವರೆಗೆ ಹೆಚ್ಚುವರಿಯಾಗಿ ಹೈವೇ ಪೆಟ್ರೋಲ್ ವಾಹನವನ್ನು ನಿಯೋಜಿಸಲಾಗಿದೆ. (ಸುಮಾರು 20 ಕೀ.ಮೀ) ಮೂಡುಬಿದಿರೆ ಠಾಣಾ ಸರಹದ್ದಿನಲ್ಲಿ ಹಾದು ಹೋಗುವ ರಾ.ಹೆ ಯಲ್ಲಿ ಈಗಾಗಲೇ ಒಂದು ಹೈವೇ ಪ್ರಟ್ರೋಲ್ ವಾಹನವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ವಾಹನಗಳು ನಿಗದಿಪಡಿಸಿದ ಕಾರ್ಯವ್ಯಪ್ತಿಯೊಳಗೆ 24*7 ಕಾಲ ಕರ್ತವ್ಯದಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net