

ಬೆಳಗಾವಿ: ಕೃಷಿ ಆಧಾರಿತ ಎಲ್ಲ ಔದ್ಯೋಗಿಕ ಕ್ಷೇತ್ರದಲ್ಲಿಯೂ ಎಂಆರ್‌ಎನ್ ಉದ್ಯೋಗ ಸಮೂಹ ಯಶಸ್ಸು ಸಾಧಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ಅಂಬಾನಿ, ಅದಾನಿ ಬಳಿಕ ನಿರಾಣಿ ಅವರೂ ಸೇರಲಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇಂಗಿತ ವ್ಯಕ್ತಪಡಿಸಿದರು.
ನಗರದಲ್ಲಿನ ಕೆಪಿಟಿಸಿಎಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶಾಲ(ಎಂಆರ್‌ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆಯ ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾರತವನ್ನು ಆತ್ಮನಿರ್ಭರ್ ಮಾಡಬೇಕಾದರೆ ಆಮದು ಮಾಡಿಕೊಳ್ಳುವ ಪೆಟ್ರೋಲಿಯಂ ವಸ್ತುಗಳಿಗೆ ಪರ್ಯಾಯವಾಗಿ ಇಥೆನಾಲ್ ಬಳಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಥೆನಾಲ್ ಉತ್ಪಾದನೆಯಲ್ಲಿ ಎಂ.ಆರ್.ಎನ್.ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.
ಜಮಖಂಡಿಯಿಂದ ಆರಂಭಗೊಂಡ ಎಂಆರ್‌ಎನ್ ಉದ್ಯೋಗ ಸಮೂಹ ಜಿಲ್ಲಾ ಮಟ್ಟದಿಂದ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದುನಿಂತಿದೆ. ಮುರುಗೇಶ ನಿರಾಣಿ ಅವರು, ಮಂತ್ರಿ ಆಗುವ ಮುನ್ನವೆ ಸಕ್ಕರೆ ಕಾರ್ಖಾನೆಗಳನ್ನು ಬೆಳೆಸಿದ್ದಾರೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಸಕ್ಕರೆ ಕಾರ್ಖಾನೆ ಆರಂಭಿಸಲಿದ್ದಾರೆ. ಐವರೂ ನಿರಾಣಿ ಸಹೋದರರಲ್ಲಿರುವ ಪರಸ್ಪರ ಸೌಹಾರ್ದತೆ ಇಂದಿನ ಜನಾಂಗಕ್ಕೆ ಮಾದರಿಯಾಗಿದೆ. ನಾವಂತೂ ಪಂಚ ಪಾಂಡವರನ್ನು ನೋಡಿಲ್ಲ. ಈ ಐವರು ನಿರಾಣಿ ಸಹೋದರರನ್ನು ನೋಡಿದಾಗ ಅವರು ನೆನಪಾಗುತ್ತಾರೆ ಎಂದು ನಿರಾಣಿ ಸಹೋದರರ ನಡುವಿನ ಬಾಂಧವ್ಯವನ್ನು ಶ್ರೀಗಳು ಕೊಂಡಾಡಿದರು.
ನಾಗನೂರ ರುದ್ರಾಕ್ಷಿಮಠದ ಅಲ್ಲಮಪ್ರಭು ಮಾತನಾಡಿ, ಎಂಆರ್‌ಎನ್ ಉದ್ಯೋಗ ಸಮೂಹ ಮೂಲಕ ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕದಲ್ಲೂ ಕೈಗಾರಿಕಾ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ. ನಿರಾಣಿ ಪರಿವಾರದವರು ಎಷ್ಟೇ ಎತ್ತರಕ್ಕೆ ಬೆಳೆದರೂ, ಸೌಜನ್ಯ, ವಿನಯತೆ ಮೈಗೂಡಿಸಿಕೊಂಡಿದ್ದಾರೆ. ಬೆಂಗಳೂರಿನ ಬಳಿಕ ಹೆಚ್ಚಿನ ಶಾಸಕರನ್ನು ಹೊಂದಿರುವ ಎರಡನೇ ರಾಜಧಾನಿ ಬೆಳಗಾವಿಯಲ್ಲಿಯೂ ಸಂಸ್ಥೆ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ಮಾತನಾಡಿದ ಉದ್ಯಮಿ ಸಂಗಮೇಶ ನಿರಾಣಿ ಅವರು, ಕಳೆದ 12-13 ವರ್ಷಗಳ ಹಿಂದೆ ಮುಧೋಳದಲ್ಲಿ ಆರಂಭಗೊಂಡ ವಿಜಯ ಬ್ಯಾಂಕ್ ಕಳೆದ ವರ್ಷ 25 ಸಾವಿರ ಕೋಟಿ ರೂ.ವ್ಯವಹಾರ ಮಾಡಿ ರಾಜ್ಯದಲ್ಲಿಯೇ ಅತಿ ಹೆಚ್ಚು ವ್ಯವಹಾರ ಮಾಡಿದ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್ ಸ್ಟೀಲ್ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ರೈತಪರ ಕಾಳಜಿಯಿಂದಾಗಿ ಕೃಷಿ ಆಧಾರಿತ ಕೈಗಾರಿಕೆಯನ್ನೇ ಮುರುಗೇಶ ಅವರು ಕಟ್ಟಿದರು. ರೈತರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ಉದ್ಯೋಗದಲ್ಲಿ ಕೇವಲ ಲಾಭಾಂಶದ ಪರಿಕಲ್ಪನೆಗೆ ಸೀಮಿತರಾಗಬಾರದು. ಸಮಾಜಕ್ಕೆ ಕೊಡುಗೆ ನೀಡುವುದಕ್ಕೂ ಸದಾ ಚಿಂತಿಸುತ್ತಿರಬೇಕು ಎಂಬುದು ಸಹೋದರ ನಿರಾಣಿ ಅವರ ಔದ್ಯೋಗಿಕ ಬದ್ಧತೆ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಆರ್‌ಬಿಐ ನಿಯಮಾನುಸಾರ ರಾಷ್ಟ್ರೀಕೃತ ಬ್ಯಾಂಕ್ ಮಾಡಲು ಮುರುಗೇಶ ನಿರಾಣಿ ಅವರು ಶ್ರಮಿಸುತ್ತಿದ್ದು, ಯಶಸ್ವಿಯಾದರೆ ಸಹಕಾರಿ ಕ್ಷೇತ್ರದಲ್ಲಿ ವಿಶಾಲ ಬ್ಯಾಂಕ್ ಮುಂದುವರಿಸುವುದು ಎಂಆರ್‌ಎನ್ ಆಶಯ ಎಂದರು.
ಎಂ.ವಿ.ಜಾಲಿ, ಭೀಮಶಿ ಮಗದುಮ್, ರಾಜೇಂದ್ರ ದೇಸಾಯಿ, ರಾಜೇಶ ನೇರ್ಲಿ, ಆನಂದ ಕುಲಕರ್ಣಿ, ಸುರೇಶ ಚಿಂಡಕ್, ಬಸವಾರ ದಲಾಲ, ಮುರುೇಂದ್ರ ಪಾಟೀಲ, ಎಂ.ಎಚ್.ದಲಾಲ ಇತರರಿದ್ದರು.